ಭಟ್ಕಳ: ಮನೆ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿದ್ದ ನಾಲ್ಕು ತಿಂಗಳ ಬಾಣಂತಿಯನ್ನು ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.
ತಾಲೂಕಿನ ಜಾಲಿ ಆಜಾದ್ ನಗರ ನಿವಾಸಿ ಸಬ್ರಿನ್ ಬಾನು ಕಲಂದಕರ ಬಾಷಾ (24) ಸಾವಿನ ದವಡೆಯಿಂದ ಪಾರಾಗಿ ಬಂದ ಮಹಿಳೆ. ಸೋಮವಾರ ಸಂಜೆ ಮನೆಯ ಸಮೀಪದ ನೀರಿನ ಟ್ಯಾಂಕ್ ಬಳಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿದ್ದು, ತಕ್ಷಣ ಇದನ್ನು ಗಮನಿಸಿದ ಆಕೆಯ ಪತಿ 10 ನಿಮಿಷದೊಳಗಾಗಿ ಇಲ್ಲಿನ ತಾಲೂಕಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆ ವೇಳೆಗಾಗಲೇ ಆಕೆ ತೀವ್ರ ಅಸ್ವಸ್ಥಗೊಂಡು ಉಸಿರಾಟ ತೊಂದರೆಯಿಂದ ಒಂದು ಸಾವಿನ ದವಡೆಗೆ ಸಿಲುಕಿದ್ದಳು.
ಆದ್ರೆ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿಯಾದ ಸವಿತಾ ಕಾಮತ ಮಾರ್ಗದರ್ಶನದಲ್ಲಿ ವೈದರಾದ ಡಾ. ಸುರಕ್ಷಿತ, ಡಾ.ಸುಬ್ರಹ್ಮಣ್ಯ ಹೆಗಡೆ, ಡಾ.ಅಕ್ಷಯ ಕುಮಾರ, ಡಾ.ಲಕ್ಷ್ಮೀಶ ಸೇರಿದಂತೆ ಅಲ್ಲಿನ ನರ್ಸ್ ಹಾಗೂ ಸಿಬ್ಬಂದಿಯು ಮಹಿಳೆಯನ್ನು ವೆಂಟಿಲೇಟನಲ್ಲಿಟ್ಟು 4 ನಿಮಿಷದೊಳಗೆ 40 ಆ್ಯಂಟಿ ಸ್ನೇಕ್ ವಿನೋಮ್ ಇಂಜೆಕ್ಷನ್ ನೀಡಿದ್ದಾರೆ. ಸಾವಿನ ಮನೆ ಸಮೀಪ ಹೋದವಳನ್ನು 4 ನಿಮಿಷದೊಳಗಡೆ ಬದುಕುಸಿದ್ದಾರೆ. ನಂತರ ಆಕೆಯನ್ನು 2 ದಿನಗಳ ಕಾಲ ಐಸಿಯುನಲ್ಲಿಟ್ಟು ಗುರುವಾರ ವಾರ್ಡಗೆ ದಾಖಲಿಸಿದ್ದಾರೆ.
ಗುರುವಾರ ಸಂಪೂರ್ಣವಾಗಿ ಚೇತರಿಸಿಕೊಂಡ ಮಹಿಳೆ ತನಗೆ ಮರುಜನ್ಮ ನೀಡಿದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹಾಗೂ ವೈದ್ಯರ ತಂಡ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿದ್ದಾಳೆ.
ಐಸಿಯುನಿಂದ ವಾರ್ಡಗೆ ಶಿಫ್ಟ್ ಆಗಿರುವ ಮಹಿಳೆಗೆ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹೂ ಗುಚ್ಛ ನೀಡಿ ಬೇಗ ಗುಣಮುಖರಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಮಹಿಳೆಯ ಮರುಜನ್ಮಕ್ಕೆ ಕಾರಣರಾದ ವೈದ್ಯರಿಗೆ, ಶುಶ್ರೂಷಕಿಯರಿಗೆ ಮತ್ತು ಸಿಬ್ಬಂದಿಗೆ ಗುಚ್ಛ ನೀಡಿ ಅಭಿನಂದಿಸಲಾಯಿತು.