ಕಾರವಾರ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದು, ನಿವೃತ್ತ ಹಾಗೂ ಹಾಲಿ ಸೈನಿಕರಿಗೆ ದೇವಸ್ಥಾನಕ್ಕೆ ನೇರ ಪ್ರವೇಶ ವ್ಯವಸ್ಥೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಐತಿಹಾಸಿಕ ಗೋಕರ್ಣ ಮಹಾಬಲೇಶ್ವರ ದೇವಸ್ಥಾಕ್ಕೆ ಆಗಮಿಸುವ ಭಕ್ತರು ಮಹಾಬಲೇಶ್ವರನ ಮತ್ತು ಶಿವನ ಆತ್ಮಲಿಂಗದ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲಬೇಕು. ವಿಶೇಷ ದಿನಗಳಲ್ಲಂತೂ ಕಿ.ಮೀ ದೂರದಲ್ಲಿ ನಿಲ್ಲಬೇಕಾಗುವ ಸ್ಥಿತಿ ಇದೆ. ದೇವಾಲಯದ ಆಡಳಿತ ಮಂಡಳಿ ಮಹತ್ವವಾದ ನಿರ್ಧಾರ ಕೈಗೊಂಡಿದ್ದು, ಸೈನಿಕರಿಗೆ ನೇರ ಸಂದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ದೇವಸ್ಥಾನದ ಮುಂಭಾಗದಲ್ಲಿ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ನೇರ ಪ್ರವೇಶ ಎಂದು ನಾಮ ಫಲಕವನ್ನು ಹಾಕಲಾಗಿದೆ.
ದೇವಸ್ಥಾನ ಆಡಳಿತಾಧಿಕಾರಿ ಜಿ.ಕೆ ಹೆಗಡೆ ರಾಮಚಂದ್ರ ಅವರು ಮಾತನಾಡಿ ಸಂಸ್ಥಾನ ಮಠದ ಶ್ರೀ ರಾಘವೇಶ್ವರ ಸ್ವಾಮಿಜಿ ಅವರ ಆಶಯದಂತೆ ಈ ಕ್ರಮಕೈಗೊಳ್ಳಲಾಗಿದೆ. ಯಾರೆ ಸೈನಿಕರು ಅಥವಾ ಮಾಜಿ ಸೈನಿಕರು ಆಗಮಿಸಿ ದೇವಸ್ಥಾನದ ಆಡಳಿತ ಮಂಡಳಿ ಬಳಿ ಭೇಟಿ ಮಾಡಿದರೆ ಸಾಕು ಕಾಯುವ ಪರಿಸ್ಥಿತಿ ಇರುವುದಿಲ್ಲ. ಇಡೀ ದೇಶವನ್ನು ಕಾಯುವ ಸೈನಿಕರಿಗೆ ನಾವು ದೇವಸ್ಥಾನದಲ್ಲಿ ಕಾಯಿಸುವುದು ಸರಿಯಾದ ಕ್ರಮವಲ್ಲ. ಈ ಕಾರಣದಿಂದ ನೇರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು