ಕಾರವಾರ: ಸೂರ್ಯ ಗ್ರಹಣ ಹಿನ್ನೆಲೆ ಪ್ರಮುಖ ದೇವಾಲಯಗಳನ್ನ ಬಂದ್ ಮಾಡಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಗೋಕರ್ಣದ ಮಹಾಬಲೇಶ್ವರ ದೇವಾಲಯ ಮಾತ್ರ ಎಂದಿನಂತೆ ತೆರೆದಿದ್ದು, ಗ್ರಹಣದ ವೇಳೆಯೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಬಗ್ಗೆ ಮಾತನಾಡಿದ ಶ್ರೀಕ್ಷೇತ್ರ ಗೋಕರ್ಣದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಅವರು, ಸ್ಥಳೀಯ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣ ಕಾಲದಲ್ಲಿ ಮಹಾಬಲೇಶ್ವರ ದೇವಾಲಯದಲ್ಲಿ ಶಿವನಿಗೆ ಗಂಗಾಜಲಾಭಿಷೇಕ ನಡೆಸಲಾಯಿತು. ಉಳಿದಂತೆ ಹೊರ ಜಿಲ್ಲೆ ಇತರೆ ಭಾಗದಿಂದ ಬಂದವರಿಗೆ ದೇವಾಲಯದ ಬದಲಾಗಿ ಸಮುದ್ರ ತೀರದಲ್ಲಿ ಧಾರ್ಮಿಕ ವಿಧಿ ವಿಧಾನ ಪೂಜಾ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಇನ್ನು ಇಡಗುಂಜಿ, ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಗ್ರಹಣದ ಬಳಿಕ ದೇವಾಲಯಗಳನ್ನು ಸ್ವಚ್ಚಗೊಳಿಸಿ ಅಭಿಷೇಕ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಹಾಗೆಯೇ ಕಾರವಾರದ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ವಿಜ್ಞಾನ ಕೇಂದ್ರದ ತಜ್ಞರ ಸಮ್ಮುಖದಲ್ಲಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.