ಕಾರವಾರ(ಉತ್ತರ ಕನ್ನಡ): ದಕ್ಷಿಣಕಾಶಿ ಅಂತಲೇ ಹೆಸರುವಾಸಿಯಾಗಿರುವ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿತೀರ್ಥ ಬಹಳ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಆತ್ಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ. ಜೊತೆಗೆ ಇಲ್ಲಿನ ಪವಿತ್ರ ಕೋಟಿತೀರ್ಥದಲ್ಲಿ ಸ್ನಾನ ಮಾಡಿ ತಮ್ಮ ಪಾಪ ಕರ್ಮಗಳನ್ನ ತೊಳೆದುಕೊಳ್ಳುತ್ತಾರೆ.
ಜೊತೆಗೆ ಅಗಲಿದ ಹಿರಿಯರಿಗೆ ಪಿಂಡ ಪ್ರಧಾನ ಕಾರ್ಯ ಕೂಡ ಈ ಕೋಟಿ ತೀರ್ಥದಲ್ಲಿ ನಡೆಯುತ್ತದೆ. ಇಲ್ಲಿ ಪಿಂಡ ಪ್ರಧಾನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆ. ಇರುವುದರಿಂದ ಹಿರಿಯರ ಕಾರ್ಯ ನೆರವೇರಿಸೋದಕ್ಕೆ ಅಂತಾನೇ ಸಾಕಷ್ಟು ಮಂದಿ ಈ ಕೋಟಿತೀರ್ಥಕ್ಕೆ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಕಳೆದ 6 ತಿಂಗಳ ಹಿಂದಷ್ಟೇ ಕಲುಷಿತವಾಗಿದ್ದ ಕೋಟಿತೀರ್ಥವನ್ನ ಜಿಲ್ಲಾಪಂಚಾಯತ್ ವತಿಯಿಂದ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿತ್ತು. ಆದರೆ, ಕೋಟಿತೀರ್ಥ ಇದೀಗ ಮತ್ತೆ ಮೊದಲಿನ ಸ್ಥಿತಿಯನ್ನೇ ತಲುಪಿದ್ದು, ಸೂಕ್ತ ನಿರ್ವಹಣೆ ಕಾಣದೇ ಪಾಚಿ ಬೆಳೆದು ಗಬ್ಬು ನಾರುತ್ತಿದೆ ಅಂತಾರೇ ಸ್ಥಳೀಯರು.
ಇನ್ನು 6 ತಿಂಗಳ ಹಿಂದೆ ರಾಜ್ಯ ಸರ್ಕಾರದಿಂದ 1.5 ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಿದ್ದು ಜಿಲ್ಲಾ ಪಂಚಾಯತ್ ಅಡಿ ಕೋಟಿತೀರ್ಥವನ್ನ ಸಂಪೂರ್ಣ ಸ್ವಚ್ಚಗೊಳಿಸಲಾಗಿತ್ತು. ಜೊತೆಗೆ ಈ ಪುಷ್ಕರಣಿಗೆ ನಗರದಿಂದ ಸೇರುವ ಮಲಿನ ನೀರನ್ನೂ ಸಹ ತಡೆಯಲಾಗಿತ್ತು. ಆದರೆ ಕೋಟಿ ತೀರ್ಥದಲ್ಲೀಗ ಪಾಚಿ ಬೆಳೆದು, ಪಿಂಡ ಪ್ರಧಾನ ಸಂದರ್ಭದಲ್ಲಿ ನೀರಿಗೆ ಬಿಡಲಾಗುವ ಅನ್ನ, ಬಾಳೆ ಎಲೆಯಂತಹ ತ್ಯಾಜ್ಯದಿಂದ ನೀರು ದುರ್ವಾಸನೆ ಬೀರುತ್ತಿದೆ.
ಇದರಿಂದ ಪುಷ್ಕರಣಿಗೆ ಬರುವ ಭಕ್ತರು ನೀರಿಗೆ ಇಳಿಯಲು ಅಸಹ್ಯ ಪಡುವಂತಾಗಿದೆ. ಇನ್ನು ಈ ಬಗ್ಗೆ ಅಧಿಕಾರಿಗಳ ಕೇಳಿದರೆ ಕೋಟಿತೀರ್ಥದ ಸ್ವಚ್ಛತಾಕಾರ್ಯವನ್ನ ಸೂಕ್ತ ರೀತಿಯಲ್ಲಿ ಮಾಡಲಾಗಿದ್ದು, ಇಲ್ಲಿಗೆ ಸೇರುತ್ತಿದ್ದ ಮಲಿನ ನೀರನ್ನು ಬೇರೆಡೆಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬರುವಂತಹ ಭಕ್ತರು ಪಿಂಡ ಪ್ರಧಾನ ಕಾರ್ಯ ಕೈಗೊಳ್ಳುವ ವೇಳೆ ಎಚ್ಚರಿಕೆ ವಹಿಸುತ್ತಿಲ್ಲವಾಗಿದ್ದು ಸ್ಥಳೀಯವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಕಾರವಾರ: ನಾಗದೋಶ ನಿವಾರಣೆಗೆ ಬಂದ ವ್ಯಕ್ತಿ ಕೋಟಿ ತೀರ್ಥದಲ್ಲಿ ಮುಳುಗಿ ಸಾವು