ಕಾರವಾರ (ಉ.ಕ): ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಬಾಣಂತಿ ಗೀತಾ ಬಾನಾವಳಿಕರ್ ಸಾವನ್ನಪ್ಪಿದ್ದ ಪ್ರಕರಣದಲ್ಲಿ 6 ತಿಂಗಳು ಕಳೆದರೂ ಆಕೆಯ ಸಾವಿಗೆ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಮೀನುಗಾರರು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಿಇಓ ಹಾಗೂ ಆರೋಪ ಎದುರಿಸುತ್ತಿರುವ ಜಿಲ್ಲಾ ಸರ್ಜನ್ ಶಿವಾನಂದ್ ಕುಡ್ತಲ್ಕರ್ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ನಗರದ ಸರ್ವೋದಯ ನಗರ ನಿವಾಸಿ ಗೀತಾ 2020ರ ಸೆಪ್ಟೆಂಬರ್ 3ರಂದು ಕ್ರೀಮ್ಸ್ ಆಸ್ಪತ್ರೆಯಲ್ಲಿ ಟ್ಯೂಬೆಕ್ಟೋಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭ ಸಾವನ್ನಪ್ಪಿದ್ದರು. ಆಕೆಯ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿಸಿಲ್ಲ. ಅಲ್ಲದೇ ಬಾಣಂತಿ ಸಾವನ್ನಪ್ಪಿ 6 ತಿಂಗಳು ಕಳೆದರೂ ಸಹ ಆಕೆಯ ಮರಣೋತ್ತರ ಪರೀಕ್ಷೆ ವರದಿ ನೀಡಿಲ್ಲ. ಆಕೆಯ ಸಾವಿನ ಕಾರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗೀತಾ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಶಿವಾನಂದ ಕುಡ್ತಲ್ಕರ್ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿ ಸರ್ಜನ್ ವರ್ಗಾವಣೆಗೆ ಆಗ್ರಹಿಸಿದ್ದರು. ಆದರೆ ಇದೀಗ ಸರ್ಜನ್ ಶಿವಾನಂದ ಮತ್ತೆ ಜಿಲ್ಲಾಸ್ಪತ್ರೆಗೆ ವರ್ಗಾವಣೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೀಗಾಗಿ ಬಾಣಂತಿ ಸಾವಿನ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ 10 ದಿನಗಳ ಗಡುವು ನೀಡಿದ್ದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರಾವಳಿಯ ಸಮಸ್ತ ಮೀನುಗಾರರು ಸೇರಿ ಕಾರವಾರವನ್ನು ಬಂದ್ ಮಾಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹೊಟ್ಟೆ ನೋವೆಂದು ದಾಖಲಾದವನಿಗೆ ಆಪರೇಷನ್.. ವೈದ್ಯರ ಎಡವಟ್ಟಿಗೆ ಜೀವನ್ಮರಣದ ನಡುವೆ ರೋಗಿ ಹೋರಾಟ