ಶಿರಸಿ : ಕಾರು ಮತ್ತು ಸರ್ಕಾರಿ ಬಸ್ನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಎಲ್ಲ ಐವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಅಸುನೀಗಿದರೆ, ಓರ್ವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಗೂ ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ನಡುವೆ ಬೆಳಗ್ಗೆ 10.30 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ (ಕೆಎ 31, ಎಫ್.1611) ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಬಸ್ನಲ್ಲಿ 60ಕ್ಕೂ ಅಧಿಕ ಪ್ರಯಾಣಿಕರು ಇದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಮೃತರು ಶಿರಸಿ ರಾಘವೆಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಕ್ಕೆ ವರನ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಂಗಳೂರಿನ ಕಿನ್ನಿ ಕಂಬಳದ ಕಂದಾದವರ ರಾಮಕೃಷ್ಣರಾವ್ ಬಾಬುರಾವ್, ವಿದ್ಯಾಲಕ್ಷ್ಮಿ ರಾಮಕೃಷ್ಣರಾವ್, ಪುಷ್ಪಾ ಮೋಹನ್ ರಾವ್, ಸುಹಾಸ್ ಗಣೇಶ್ ರಾವ್ ಹಾಗೂ ಅವರಿಗೆ ಪರಿಚಿತರಾದ ಚೆನೈ ಮೂಲದ ಅರವಿಂದ್ ಮೃತಪಟ್ಟವರು. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಚೆನೈ ಮೂಲದ ಅರವಿಂದ್ಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ವ್ಯಕ್ತಿಗಳ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಎಸ್ಪಿ ಪ್ರತಿಕ್ರಿಯೆ: ''ಬೆಳಗ್ಗೆ 10.30ರ ಸುಮಾರಿಗೆ ಕಾರು ಹಾಗೂ ಸಾರಿಗೆ ಬಸ್ ನಡುವೆ ಬಂಡಲ ಬಳಿ ಅಫಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಎಲ್ಲ ಐವರೂ ಕೂಡ ಮೃತರಾಗಿದ್ದಾರೆ. ಕಾರಿನಲ್ಲಿದ್ದವರು ಮಂಗಳೂರಿನಿಂದ ಶಿರಸಿ ಕಡೆಗೆ ತೆರಳುತ್ತಿದ್ದರು. ಬಸ್ ಶಿರಸಿಯಿಂದ ಭಟ್ಕಳಕ್ಕೆ ಹೊರಟಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟಾಟಾ ಏಸ್ - ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಸಾವು, ಒಬ್ಬನಿಗೆ ಗಾಯ