ಭಟ್ಕಳ: ಕೋಣಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬತ್ತೆ ಹಡೀನಲ್ಲಿನ ಗಣೇಶ ಹೆಬ್ಬಾರ ಎಂಬುವವರ ಮನೆಯ ತೋಟದಲ್ಲಿ 4 ಮಂಗಗಳು ಹಾಗೂ ಒಂದು ಮರಿ ಮಂಗ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಕಳೆದ 10 ದಿನದ ಹಿಂದೆ ಈ ಮಂಗಗಳು ಸಾವನ್ನಪ್ಪಿವೆ ಎನ್ನಲಾಗ್ತಿದೆ. ಮಂಗಗಳು ಸಂಪೂರ್ಣ ಕೊಳೆತ ಸ್ಥಿತಿಗೆ ತಲುಪಿದ ಹಿನ್ನೆಲೆ ಸ್ಥಳೀಯರು ಅಲ್ಲಿನ ಅರಣ್ಯ ಇಲಾಖೆ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಡಾ. ಮಿಥುನ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ಸತ್ತ ಎಲ್ಲ ಮಂಗಗಳ ಪರಿಶೀಲನೆ ನಡೆಸಿದ್ದು, ಮಂಗಗಳು ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಂಗಗಳ ಸಾವು ನಿಗೂಢ:
ಈ ಹಿಂದೆ ಬೈಲೂರಿನ ಹೆದ್ದಾರಿಯಲ್ಲಿ ಮಂಗವೊಂದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ಸಬ್ಬತ್ತೆಯಲ್ಲಿ ನಾಲ್ಕು ಮಂಗಗಳು ಸಾವನ್ನಪ್ಪಿವೆ. ಇದರಿಂದ ಕೋಣಾರ ವ್ಯಾಪ್ತಿಯ ಜನರು ಮಂಗನ ಕಾಯಿಲೆಯ ಭೀತಿ ಎದುರಿಸುವಂತಾಗಿದೆ.
ದೊಡ್ಡ ಪಕ್ಷಿಯಿಂದ ಮಂಗಗಳ ಸಾವು?:
ಆಹಾರ ಹುಡುಕಿ ಬರುವ ದೊಡ್ಡ ಪಕ್ಷಿಗಳಾದ ಹದ್ದು, ಗಿಡುಗ ಹಾಗೂ ಮಂಗಗಳ ಮಧ್ಯೆ ಕಾದಾಟ ಉಂಟಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದಾಗಿದೆ. ಇದು ಯಾವೊಬ್ಬ ಸ್ಥಳೀಯರ ಗಮನಕ್ಕೆ ಬಾರದೇ ಕೊಳೆತಿರಬಹುದು ಎಂಬ ಮಾತು ಸ್ಥಳೀಯವಾಗಿದೆ ಕೇಳಿ ಬಂದಿದೆ.