ಕಾರವಾರ: ಕಾಂಗ್ರೆಸ್ನಿಂದ ಬಂಡಾಯ ಎದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ತಮ್ಮ ನಾಮಪತ್ರವನ್ನು ಹಿಂಪಡೆಯುವುದರ ಜೊತೆಗೆ ರಾಜಕೀಯ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕಾರ್ಯಕರ್ತರ ಒತ್ತಾಯದ ಮೇರೆಗೆ ಬಂಡಾಯವಾಗಿ ಸ್ಪರ್ಧಿಸಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಇದು ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಅವರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ, ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಡಿಕೆಶಿ ಎಂಎಲ್ಸಿ ಅಥವಾ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆ ಕೊಡುವುದಾಗಿಯೂ ಶಾರದಾ ಮೋಹನ ಶೆಟ್ಟಿಗೆ ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಂಬಲಿಗರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ನಾಮಪತ್ರವನ್ನು ಹಿಂಪಡೆದಿದ್ದೇನೆ ಮತ್ತು ರಾಜಕೀಯ ಕ್ಷೇತ್ರದಿಂದ ದೂರ ಉಳಿಯುತ್ತೇನೆ ಎಂದರು. ಸಕ್ರಿಯ ರಾಜಕೀಯದಿಂದ ದೂರ ಉಳಿದು ನನ್ನ ಕೆಲಸ ಮತ್ತು ಕಾರ್ಯಕರ್ತರ ಕುಶಲೋಪಚಾರ ಹಾಗೂ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಪಕ್ಷಕ್ಕಾಗಿ ಹಲವು ವರ್ಷದಿಂದ ನಾನು ಮತ್ತು ನಮ್ಮ ಕುಟುಂಬದವರು ಕೆಲಸ ಮಾಡಿದ್ದೇವೆ. ಆದರೆ, ಪಕ್ಷ ಟಿಕೆಟ್ ನೀಡದಿರುವುದು ನೋವುಂಟು ಮಾಡಿದೆ. ಅಲ್ಲದೇ ರಾಜಕೀಯ ನಿವೃತ್ತಿ ಪಡೆದ ಮೇಲೆ ಯಾರೊಬ್ಬರಿಗೂ ಬೆಂಬಲಿಸುವ ಪ್ರಮೇಯವೇ ಇಲ್ಲ. ನನ್ನ ಬೆಂಬಲಿಗರು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಶಾರದಾ ಮೋಹನ ಶೆಟ್ಟಿ ಇಂದು ಸಂಜೆ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ನಾಳೆ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಮಾಜಿ ಸಚಿವ ಎಂ ಪಿ ಪ್ರಕಾಶ್ ಪುತ್ರಿ, ಮೊಮ್ಮಗ ಬಿಜೆಪಿ ಸೇರ್ಪಡೆ