ಶಿರಸಿ: ಕಾನೂನಿಗೆ ವ್ಯತಿರಿಕ್ತವಾಗಿ ನಿವಾಸಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಕ್ಕಲೆಬ್ಬಿಸುವ ಕೃತ್ಯಕ್ಕೆ ಪೊಲೀಸ್ ರಕ್ಷಣೆ ನೀಡಬಾರದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಬುಧವಾರ ಡಿವೈಎಸ್ಪಿ ಕಚೇರಿಗೆ ತೆರಳಿ ಸ್ಥಳೀಯ ವೃತ್ತ ನಿರೀಕ್ಷಕ ಪ್ರದೀಪ ಬಿ.ಯು ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅರಣ್ಯವಾಸಿಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ದಿಶೆಯಲ್ಲಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಚ್ಯುತಿ ಮತ್ತು ಕಾನೂನುಬಾಹಿರ ಕೃತ್ಯದ ಬಗ್ಗೆ ಟೀಕೆಗೆ ಕಾರಣವಾಗಿ ವ್ಯಾಪಕವಾಗಿ ಚರ್ಚೆಗೆ ಆಸ್ಪದವಾಗಿದೆ. ಈ ದಿಶೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಒತ್ತಾಯಿಸಿದಾಗಲೂ ಅರಣ್ಯ ಸಿಬ್ಬಂದಿ ಪದೇಪದೆ ಕಾನೂನು ಬಾಹಿರ ಕೃತ್ಯ ಮುಂದುವರೆಸುತ್ತಿದ್ದಾರೆ.
ಅರಣ್ಯ ಸಿಬ್ಬಂದಿ ಕರ್ತವ್ಯ ಚ್ಯುತಿ ಸಂಬಂಧಿಸಿ ಸಾರ್ವಜನಿಕ ಮತ್ತು ಅರಣ್ಯವಾಸಿಗಳ ಹಿತಾಸಕ್ತಿಯಿಂದ ವೇದಿಕೆ ಈಗಾಗಲೇ ಏಳು ಪ್ರಶ್ನೆಗಳ ಬಹಿರಂಗ ಪತ್ರ ಬರೆದಿದ್ದು, ಉತ್ತರದ ನಿರೀಕ್ಷೆಯಲ್ಲಿ ಹೋರಾಟಗಾರರ ವೇದಿಕೆ ಇದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.