ಕಾರವಾರ: ಜಿಲ್ಲೆಯಲ್ಲಿ 4-5 ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಇದರಿಂದಾಗಿ ಜಿಲ್ಲೆಯ ಅಘನಾಶಿನಿ, ಶರಾವತಿ ನದಿಗಳು ಉಕ್ಕಿ ಹರಿದು ನದಿಪಾತ್ರದ ಮನೆ, ಜಮೀನುಗಳು ಮುಳುಗಡೆಯಾಗಿವೆ. ಅದರಲ್ಲೂ ನಿನ್ನೆ ಸುರಿದ ಮಳೆಗೆ ಹೊನ್ನಾವರದಲ್ಲಿ ಗುಂಡುಬಾಳ ಹೊಳೆ ಮತ್ತು ಕುಮಟಾದಲ್ಲಿ ಅಘನಾಶಿನಿ ನದಿ ಉಕ್ಕಿ ಹರಿದು ನದಿತೀರದ ಮನೆಗಳು ಪ್ರವಾಹಕ್ಕೆ ಸಿಲುಕಿವೆ. ಆದರೆ ಇಂದು ಮಳೆ ಕೊಂಚ ಕಡಿಮೆಯಾಗಿದೆ.
ಆದರೆ ಕುಮಟಾ ತಾಲ್ಲೂಕಿನ ಗ್ರಾಮಗಳಲ್ಲಿ ಇನ್ನು ಕೂಡ ನೀರು ನಿಂತಿದ್ದು, ಜನ ಭಯಭೀತರಾಗಿದ್ದಾರೆ. ಎರಡು ದಿನಗಳಿಂದ ಕಾಳಜಿ ಕೇಂದ್ರ ಸೇರಿಕೊಂಡಿರುವ ಜನರ ಮನೆಯಲ್ಲಿದ್ದ ಸಾಮಾನುಗಳು ಪ್ರವಾಹದ ನೀರಿಗೆ ಕೊಚ್ಚಿ ಹೋಗಿವೆ. ಇಂದು ಕೊಂಚ ನೆರೆ ಮಟ್ಟ ಕೊಂಚ ಕಡಿಮೆಯಾಗಿದ್ದು, ಜನ ದೋಣಿ ಮೂಲಕ ಮನೆಗೆ ತೆರಳಿ ಅಳಿದುಳಿದ ಸಾಮಾನುಗಳನ್ನು ಸರಿಪಡಿಸ ತೊಡಗಿದ್ದಾರೆ.
ಕುಮಟಾದಲ್ಲಿ ಅಘನಾಶಿನಿ ನದಿ ಸೇರುವ ಬಡಗಣಿ ಹಳ್ಳ ಮತ್ತು ಹೊನ್ನಾವರ ತಾಲ್ಲೂಕಿನಲ್ಲಿ ಗುಂಡಬಾಳ ಹೊಳೆ ಉಕ್ಕಿದ ಪರಿಣಾಮ ಪ್ರವಾಹ ಸಂಭವಿಸಿದೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಪ್ರವಾಹದಿಂದ ಮುಳುಗಡೆಯಾಗಿವೆ. ಸುಮಾರು 35 ಮನೆಗಳಿಗೆ ನೀರು ನುಗ್ಗಿದ್ದು ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಸಂತ್ರಸ್ತರ ಆರೋಪಿಸಿದ್ದಾರೆ. ಮುಂದಿನ ಎರಡು ದಿನ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.