ಕಾರವಾರ(ಉತ್ತರಕನ್ನಡ): 2019. ಈ ವರ್ಷದಲ್ಲಿ ಉತ್ತರಕನ್ನಡ ಜಿಲ್ಲೆ ಕಂಡು ಕೇಳರಿಯದ ಧಾರಾಕಾರ ಮಳೆಗೆ ಸಾಕ್ಷಿಯಾಗಿತ್ತು. ಹಲವೆಡೆ ವಾರಗಳ ಕಾಲ ನೆರೆ ಪರಿಸ್ಥಿತಿ ಆವರಿಸಿತ್ತು. 2020ರಲ್ಲಿ ಅಷ್ಟು ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿಲ್ಲವಾದರೂ ಕೆಲವೆಡೆ ಸುರಿದ ಮಳೆ ಸಾಕಷ್ಟು ಹಾನಿ ಉಂಟುಮಾಡಿದೆ. ಆದ್ರೆ ಕಳೆದ 2021ರಲ್ಲಿ ಸುರಿದ ಭಾರಿ ಮಳೆಗೆ ಕಾಳಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ ಹೊರಬಿಟ್ಟ ನೀರಿನಿಂದಾಗಿ ನದಿ ಪಾತ್ರದ ಸಾಕಷ್ಟು ಮನೆಗಳು ಕೊಚ್ಚಿ ಹೋಗಿದ್ದವು. ಏಕಾಏಕಿ ಜಲಾಶಯದಿಂದ ನೀರು ಹೊರಬಿಟ್ಟಿದ್ದು ಜನರು ಸರ್ವಸ್ವವನ್ನೂ ಕಳೆದುಕೊಳ್ಳುವಂತಾಯಿತು. ಘಟನೆ ನಡೆದು ವರ್ಷ ಕಳೆಯುತ್ತಾ ಬಂದರೂ ಈವರೆಗೂ ಅವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.
ಆ ಸಂದರ್ಭದಲ್ಲಿ ಜಿಲ್ಲಾಡಳಿತ ನೆರೆ ನಿರಾಶ್ರಿತರಿಗೆ ಪರಿಹಾರದ ಜೊತೆಗೆ ಮನೆ ಕಟ್ಟಿಕೊಳ್ಳಲು ಪರ್ಯಾಯ ಜಾಗ ನೀಡುವುದಾಗಿ ಭರವಸೆ ನೀಡಿತ್ತು. ಘಟನೆ ನಡೆದು ವರ್ಷ ಕಳೆಯುತ್ತಾ ಬಂದಿದ್ದು ಈವರೆಗೂ ಹಲವು ನಿರಾಶ್ರಿತರಿಗೆ ಪರಿಹಾರ ಕೈಸೇರಿಲ್ಲ. ಮನೆ ಕಟ್ಟಿಕೊಳ್ಳಲು ಜಾಗವನ್ನೂ ನೀಡಿಲ್ಲ.
ಇದನ್ನೂ ಓದಿ: ಮಳೆ ನಿಂತ ಮೇಲೆ ಗದ್ದೆಯಲ್ಲೇ ಭತ್ತದ ಪೈರಿನ ಮೊಳಕೆ: ದಾವಣಗೆರೆ ರೈತರ ಆತಂಕ
ಜಲಾಶಯದಿಂದ ಹೊರಬಿಟ್ಟ ನೀರಿನಿಂದಾಗಿ ಜಲಾಶಯ ವ್ಯಾಪ್ತಿಯ ಕದ್ರಾ, ಮಲ್ಲಾಪುರ, ಗಾಂಧಿನಗರ, ಕುರ್ನಿಪೇಟ್ ಸೇರಿದಂತೆ ಸಾಕಷ್ಟು ಪ್ರದೇಶಗಳಲ್ಲಿ ನೆರೆ ಹಾನಿ ಸಂಭವಿಸಿದೆ. ಅದರಲ್ಲೂ ಜಲಾಶಯದ ಬುಡದಲ್ಲೇ ಇರುವ ಗಾಂಧಿನಗರ ಭಾಗದ ಇಪ್ಪತ್ತಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದವು.
ಪರಿಣಾಮ, ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸದ್ಯ ಬಾಡಿಗೆ ಮನೆಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಇನ್ನೇನು ಮಲೆಗಾಲ ಆರಂಭವಾಗಲಿದ್ದು ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಅಂತಾರೆ ಸ್ಥಳೀಯರು.