ಕಾರವಾರ : ತೀವ್ರ ಆತಂಕ ಸೃಷ್ಟಿಸುತ್ತಿರೋ ಕೊರೊನಾ ವೈರಸ್ ಮೀನುಗಾರಿಕೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಮೊದಲೇ ಮತ್ಸ್ಯಕ್ಷಾಮದಿಂದ ಕಂಗಾಲಾಗಿದ್ದ ಮೀನುಗಾರರಿಗೆ ಇದೀಗ ಸಂಪೂರ್ಣ ಮೀನುಗಾರಿಕೆಯೇ ಸ್ಥಗಿತಗೊಂಡಿದೆ. ಒಂದು ಹೊತ್ತಿನ ಊಟಕ್ಕೂ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.
ದೇಶದಾದ್ಯಂತ ಕೊರೊನಾ ವೈರಸ್ ತಡೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರ ಪರಿಣಾಮ ಮೀನುಗಾರಿಕೆ ಮೇಲೂ ಬೀರಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ಯಾವುದೇ ಬೋಟ್‌ಗಳು ನೀರಿಗೆ ಇಳಿಯುತ್ತಿಲ್ಲ. ಎಲ್ಲವೂ ನಗರದ ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿವೆ. ಕಳೆದೊಂದು ವಾರದಿಂದ ಬಂದರು ಸಂಪೂರ್ಣ ಖಾಲಿ ಖಾಲಿಯಾಗಿದೆ.
ಹೊರ ರಾಜ್ಯಗಳಿಂದ ಕೆಲಸಕ್ಕೆ ಆಗಮಿಸಿದ ಕಾರ್ಮಿಕರು ಕೆಲಸವಿಲ್ಲದೆ ಬೋಟ್‌ಗಳ ಮೇಲೆಯೇ ಕಾಲ ಕಳೆಯುತ್ತಿದ್ದಾರೆ. ಇತ್ತ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಕೆಲವೇ ಮೀನುಗಾರರು ನಡೆಸುತ್ತಿದ್ದಾರೆ. ಮೀನಿನ ದರ ಕೂಡ ಗಗನಕ್ಕೇರಿದೆ.