ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆ ಬೆಂಗಳೂರಿನ ವಿಕಾಸಸೌಧದಲ್ಲಿ ಜನವರಿ 31ರಂದು ಮೀನುಗಾರರ ಜೊತೆ ನಡೆಸಲು ಉದ್ದೇಶಿಸಿದ್ದ ಸಭೆ ರದ್ದು ಮಾಡಲಾಗಿದೆ ಎಂದು ಮೀನುಗಾರಿಕೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿರುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆ ನೀಡಿದ್ದಾರೆ.
ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ, ಮಾಜಿ ಶಾಸಕ ಸತೀಶ್ ಸೈಲ್ ತಾವೇ ತಡೆಯಾಜ್ಞೆ ತಂದಿದ್ದಾಗಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಕಾಮಗಾರಿ ಶಿಲಾನ್ಯಾಸ ಮಾಡುವಾಗ ಅಧ್ಯಕ್ಷತೆ ವಹಿಸಿದ್ದು ಯಾಕಾಗಿ? ಆಗಲೇ ಕಾಮಗಾರಿ ನಿಲ್ಲಿಸಬಹುದಿತ್ತು. ಅಧಿಕಾರದಲ್ಲಿ ಇರುವಾಗ ಕಾಣದ ದೋಷಗಳು ಈಗ ಹೇಗೆ ಕಂಡವು? ಮೀನುಗಾರರ ಬದುಕಿನ ಜೊತೆ ಚೆಲ್ಲಾಟ ಆಡುವ ಇಂತಹ ಪ್ರವೃತ್ತಿಗೆ ಮೀನುಗಾರರು ಮಣೆ ಹಾಕಬಾರದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.