ಕಾರವಾರ: ಸಚಿವರು ಸಮಸ್ಯೆ ಆಲಿಸಲು ಬಾರದ ಹಿನ್ನೆಲೆ ಆಕ್ರೋಶಗೊಂಡ ಮೀನುಗಾರರು ಸಚಿವರಿಗೆ ನೀಡಲು ತಂದಿದ್ದ ಮನವಿ ಪತ್ರ, ಹೂಗುಚ್ಛ ಸಮುದ್ರಕ್ಕೆ ಎಸೆದ ಘಟನೆ ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ನಡೆಯಿತು.
ಉತ್ತರಕನ್ನಡ ಜಿಲ್ಲೆಗೆ ಎರಡು ದಿನದ ಪ್ರವಾಸದ ಕೈಗೊಂಡಿದ್ದ ಮೀನುಗಾರಿಕಾ ಸಚಿವ ಎಸ್.ಅಂಗಾರ ಇಂದು ಮುರುಡೇಶ್ವರದಿಂದ ನೇರವಾಗಿ ಭಟ್ಕಳದ ವಿವಿಧ ಬಂದರುಗಳಿಗೆ ತೆರಳಿ ಮೀನುಗಾರರ ಸಮಸ್ಯೆ ಆಲಿಸಿದರು. ಹೊನ್ನಾವರದ ಕಾಸರಗೋಡು ಬಂದರಿನಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಿಸದಂತೆ ಮೀನುಗಾರರು ಸಚಿವರಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು.
ಇದು ವಿವಾದಿತ ಪ್ರದೇಶವೆಂದು ತಿಳಿದ ಸಚಿವರು ತಮ್ಮ ಬಂದರು ಭೇಟಿಯನ್ನು ಏಕಾಏಕಿ ರದ್ದುಗೊಳಿಸಿದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಸಚಿವರಿಗೆ ನೀಡಲು ತಂದಿದ್ದ ಮನವಿ ಪತ್ರಗಳನ್ನು ಸಮುದ್ರಕ್ಕೆಸೆದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಚಿವರನ್ನು ಕೇಳಿದ್ರೆ, ಮೀನುಗಾರರು ಕಾಯುತ್ತಿದ್ದ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲದೆ, ತುರ್ತಾಗಿ ಉಡುಪಿಗೆ ತೆರಳಬೇಕಾಗಿದ್ದು, ಶುಕ್ರವಾರ ಮುಖ್ಯಮಂತ್ರಿ ಚಿಕ್ಕಮಗಳೂರಿಗೆ ಆಗಮಿಸುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಲ್ಲಿರಬೇಕಾಗಿದೆ. ತುರ್ತು ಕಾರ್ಯಕ್ರಮ ಇಲ್ಲದೆ ಇದ್ದಲ್ಲಿ ಕಾಸರಕೋಡು ಬಂದರಿಗೆ ತೆರಳುತ್ತಿದ್ದೆ ಎಂದು ಹೇಳಿದ್ದಾರೆ.
ಓದಿ : ಕೊರೊನಾ ಕಾಲದಲ್ಲಿ ಶಾಲಾ ಶುಲ್ಕ ಕಟ್ಟುವುದಾದರೂ ಹೇಗೆ? ಪೋಷಕರ ಆತಂಕ