ಕಾರವಾರ : ಕೆಲಸಕ್ಕೆಂದು ತೆರಳಿದ ಉತ್ತರಕನ್ನಡ ಜಿಲ್ಲೆಯ ನೂರಾರು ಮೀನುಗಾರರು ಮಹಾರಾಷ್ಟ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಮೀನುಗಾರಿಕಾ ಉದ್ಯೋಗಕ್ಕೆಂದು ತೆರಳಿದ ಕಾರವಾರ, ಅಂಕೋಲಾ, ಬೇಲೆಕೇರಿ, ಕುಮಟಾ ಹಾಗೂ ಭಟ್ಕಳ ಭಾಗದ ಸುಮಾರು 150ಕ್ಕೂ ಹೆಚ್ಚು ಮೀನುಗಾರರು ಮಹಾರಾಷ್ಟ್ರದ ರತ್ನಗಿರಿ ಹಾಗೂ 100ಕಿ.ಮೀ. ದೂರದ ನಟ್ಯಾದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಮೊಬೈಲ್ನಲ್ಲಿ ವಿಡಿಯೋ ಮಾಡಿದ ಮೀನುಗಾರರು ರಕ್ಷಣೆಗಾಗಿ ಅಂಗಲಾಚಿದ್ದಾರೆ.
ಮೀನುಗಾರರು ಬರಲು ಅಧಿಕಾರಿಗಳು ಬಿಡುತ್ತಿಲ್ಲ, ಇತ್ತ ದುಡಿದ ದುಡಿಮೆಗೆ ಮಾಲೀಕರು ಸಂಬಳ ಕೂಡ ನೀಡಿಲ್ಲ. ಇದರಿಂದ ನೊಂದಿರುವ ಇವರು 'ಅತ್ತ ತವರಿಗೂ ಬರಲಾಗದೆ, ಇತ್ತ ಊಟೋಪಚಾರವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸ್ಥಳೀಯರು ಕೊಡುವ ಅಲ್ಪ ಸ್ವಲ್ಪ ಆಹಾರ ತಿಂದು ಬದುಕುತ್ತಿದ್ದೇವೆ ' ಎಂದು ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ. ಕೊರೊನಾ ವೈರಸ್ ಸಂಬಂಧ ಅಧಿಕಾರಿಗಳು ಬಿಡುವುದಿಲ್ಲ ಎಂದು ಮಾಲೀಕರು ನೆಪ ಹೇಳುತ್ತಿದ್ದಾರೆ. ಸಂಬಳ ಕೇಳಿದರೆ ದುಡಿಮೆಯೇ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಊರುಗಳಿಗೆ ತೆರಳಲು ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ. ನಮಗೆ ಸರಿಯಾಗಿ ಊಟ-ತಿಂಡಿ ಸಿಗುತ್ತಿಲ್ಲ. ನಿದ್ರಿಸಲು ಜಾಗವಿಲ್ಲದ ಸ್ಥಿತಿಯಲ್ಲಿ ತಾವಿದ್ದು, ತಮ್ಮನ್ನು ಕರೆಸಿಕೊಳ್ಳಲು ನೆರವಾಗುವಂತೆ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ಇಡಲಾಗಿದೆ.