ಭಟ್ಕಳ/ಉತ್ತರ ಕನ್ನಡ: ಮೀನು ಮಾರಾಟ ಮಾಡಲು ಬೇರೆಯವರಿಗೆ ಪರವಾನಿಗೆ ನೀಡಿದ್ದನ್ನು ಖಂಡಿಸಿ ಮೀನು ಮಾರಾಟ ಮಾಡುವ ಮಹಿಳೆಯರು ಮಾರುಕಟ್ಟೆ ಬಿಟ್ಟು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮೀನು ಮಾರಾಟಕ್ಕೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ಮುಂಭಾಗ ಈ ಘಟನೆ ನಡೆದಿದೆ. ಪಂಚಾಯತ್ ಎದುರು ನೂರಾರು ಮಹಿಳಾ ಮೀನು ವ್ಯಾಪಾರಿಗಳು ಮೀನು ವ್ಯಾಪಾರ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದ್ರು. ಶಿರಾಲಿ ಗ್ರಾಪಂ ಆಡಳಿತವರ್ಗ ಮೀನು ಮಾರುಕಟ್ಟೆ ಎದುರುಗಡೆ ದೊಡ್ಡ ವ್ಯಾಪಾರಸ್ಥರೊಬ್ಬರಿಗೆ ಮೀನು ಮಾರಾಟ ಮಾಡಲು ಅನಧಿಕೃತ ಪರವಾನಿಗೆ ಕೊಟ್ಟಿದೆ. ಇದರಿಂದಾಗಿ ಮಹಿಳಾ ಮೀನು ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡ್ರು.
ಈ ಬಗ್ಗೆ ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಸದಸ್ಯರ ತಂಡ ಸಭೆ ಸೇರಿ ಸಮಸ್ಯೆಯ ಬಗ್ಗೆ ಚರ್ಚಿಸಿದ್ರು. ನಂತ್ರ ಸಭೆಯ ಕೊನೆಯಲ್ಲಿ ಹೊರಗಡೆ ಮೀನು ವ್ಯಾಪಾರ ಮಾಡುತ್ತಾ ಪ್ರತಿಭಟಿಸುತ್ತಿದ್ದ ವ್ಯಾಪಾರಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿಯೇ ಮಾರುಕಟ್ಟೆ ಹೊರಗೆ ಮೀನು ವ್ಯಾಪಾರ ಮಾಡಲು ನೀಡಿದ್ದ ಪರವಾನಿಗೆಯನ್ನು ರದ್ದು ಪಡಿಸಿದರು.