ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಪರಿಷತ್ ಚುನಾವಣಾ ಕಾವು ಜೋರಾಗಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಜಿಲ್ಲೆ ಬಿಜೆಪಿಯ ಐವರು ಶಾಸಕರನ್ನು ಹೊಂದಿದ್ದು, ಪರಿಷತ್ ಚುನಾವಣೆ ಸಾಕಷ್ಟು ಮಹತ್ವ ಪಡೆದಿದೆ. ಉಸ್ತುವಾರಿ ಸಚಿವ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರೂ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ಪಕ್ಷದ ಪ್ರಭಾವಿ ಮುಖಂಡ ಹಾಗೂ ಫೈರ್ ಬ್ರ್ಯಾಂಡ್ ನಾಯಕ ಅನಂತ್ ಕುಮಾರ್ ಹೆಗಡೆ ಮಾತ್ರ ಎಂಎಲ್‌ಸಿ ಚುನಾವಣಾ ಕಣದಿಂದ ಕಣ್ಮರೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಬಿಜೆಪಿಯ ಮಟ್ಟಿಗೆ ಅನಂತ್ ಕುಮಾರ್ ಹೈಕಮಾಂಡ್ ಇದ್ದಂತೆ. ಯಾವುದೇ ಚುನಾವಣೆಗಳಿದ್ದರೂ ಸಹ ಅವರು ಸೂಚಿಸಿದ ಅಭ್ಯರ್ಥಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುತ್ತದೆ ಅನ್ನೋದು ಪಕ್ಷದ ವಲಯದಲ್ಲೇ ಕೇಳಿ ಬರುತ್ತಿದ್ದ ಮಾತುಗಳು. ಆದರೆ ಈ ಬಾರಿ ಪರಿಷತ್ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೂ ಸಹ ಅನಂತ್ ಮಾತ್ರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಲಿ ಅಥವಾ ಅಭ್ಯರ್ಥಿ ಪರ ಪ್ರಚಾರದಲ್ಲಾಗಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಪಕ್ಷದವರಲ್ಲೂ ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಪಕ್ಷದ ಮುಖಂಡರುಗಳಿಗೂ ಇರಿಸುಮುರುಸು ಉಂಟು ಮಾಡಿದೆ.
ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಕಾರವಾರದ ಗಣಪತಿ ಉಳ್ವೇಕರ್‌ಗೆ ಟಿಕೆಟ್ ನೀಡಲಾಗಿದ್ದು, ಕಾರವಾರದ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಆದರೆ ತಾನು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಮುನಿಸಿಕೊಂಡಿದ್ದು, ಈ ಕಾರಣದಿಂದಲೇ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಜನ ಸ್ವರಾಜ್ ಯಾತ್ರೆ ವೇಳೆಯಲ್ಲಿಯೂ ಅನಂತ್ ಗೈರಾಗಿದ್ದರು.
ಜಿಲ್ಲೆಯಲ್ಲಿ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಹೆಗಡೆಗೆ ಪಕ್ಷದಲ್ಲಿ ಸಾಕಷ್ಟು ಪ್ರಬಲ್ಯವಿರುವ ಜೊತೆಗೆ, ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿ ಬಳಗವಿದೆ. ಪರಿಷತ್ ಚುನಾವಣಾ ಪ್ರಚಾರದಲ್ಲಿ ಅವರ ಹಾಜರಾತಿಯಿಂದ ಬಹುಪಾಲು ಮತಗಳನ್ನು ಸೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಅನಂತ್ ಕುಮಾರ್ ಮಾತ್ರ ಬಹಿರಂಗವಾಗಿ ಎಲ್ಲಿಯೂ ಅಭ್ಯರ್ಥಿ ಪರ ಬೆಂಬಲ ವ್ಯಕ್ತಪಡಿಸಿಲ್ಲವಾಗಿದ್ದು, ಚುನಾವಣಾ ಕಣದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದ ಅನಂತ್ ಬೆಂಬಲಿಗರಿಗೆ ಸಾಕಷ್ಟು ಗೊಂದಲ ಉಂಟು ಮಾಡಿದೆ. ಇದು ಪರೋಕ್ಷವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಪಕ್ಷದ ವಕ್ತಾರರನ್ನು ಕೇಳಿದ್ರೆ ಅನಂತ್ಕುಮಾರ್ ಹೆಗಡೆ ಜವಾಬ್ದಾರಿಯುತ ನಾಯಕನಾಗಿದ್ದು, ತಮ್ಮದೇ ಆದ ಕೆಲಸ ಕಾರ್ಯಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ಮೂಲಕ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ನಿಂದ ಗಂಗಾವತಿಗೆ ಪ್ರಯಾಣಿಸಿದ ಕೋಳಿಗೂ ಅರ್ಧ ಟಿಕೆಟ್ ನೀಡಿದ ಕಂಡಕ್ಟರ್