ಕಾರವಾರ: ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ನಾಳೆ ಮತದಾನ ನಡೆಯಲಿರುವ ಹಿನ್ನೆಲೆ ಇಂದು ಮತಪೆಟ್ಟಿಗೆ ಪರಿಶೀಲನಾ ಕಾರ್ಯ ಕಾರವಾರದ ಸೇಂಟ್ ಮೈಕಲ್ ಶಾಲೆಯಲ್ಲಿ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 231 ಗ್ರಾಪಂಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 101 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಕಾರವಾರದ 115, ಅಂಕೋಲಾ 113, ಕುಮಟಾ 164, ಹೊನ್ನಾವರ 169 ಹಾಗೂ ಭಟ್ಕಳಲ್ಲಿ 137 ಮತಗಟ್ಟೆಗಳನ್ನು ತೆರೆಯಲಾಗಿದೆ. ತಾಲೂಕಿನಲ್ಲಿ ಚುನಾವಣಾ ಪ್ರಕ್ರಿಯೆಗೆ ಒಟ್ಟು 1,536 ಪಿಆರ್ಒ ಹಾಗೂ 723 ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ 3,795 ಮಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇನ್ನು ಕಾರವಾರ ತಾಲೂಕಿನ 115 ಮತಗಟ್ಟೆಗಳಿಗೆ ತೆರಳುವ ಮತ ಪೆಟ್ಟಿಗೆಗಳ ಪರಿಶೀಲನೆ ಸೇಂಟ್ ಮೈಕಲ್ ಶಾಲೆಯಲ್ಲಿ ನಡೆಯಿತು. ಆಯಾ ಮತಗಟ್ಟೆಯ ಮತ ಪೆಟ್ಟಿಗೆಯೊಂದಿಗೆ ಸಿಬ್ಬಂದಿ ಮಸ್ಟ್ರಿಂಗ್ ಕೇಂದ್ರದಲ್ಲಿ ಸಿದ್ಧತೆ ನಡೆಸಿದರು. ಬಳಿಕ ಮತದಾನದ ನಿಮಿತ್ತ ಆಯಾ ಮತ ಪೆಟ್ಟಿಗೆ ಪರಿಶೀಲನೆ ನಡೆಸಿ, ಚುನಾವಣಾ ಸಿಬ್ಬಂದಿಯನ್ನು ಮತದಾನ ಕೇಂದ್ರಕ್ಕೆ ಕಳುಹಿಸಿ ಕೊಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.