ಕಾರವಾರ: ಬೆಳೆ ಸರಿಯಾಗಿ ಬಾರದೇ ಇದ್ದುದದ್ದರಿಂದ ಮನನೊಂದ ರೈತನೋರ್ವ ಮನೆಯಲ್ಲಿದ್ದ ಇಲಿಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾವರ ತಾಲೂಕಿನ ಅನಂತವಾಡಿಯ ಜಡ್ಡಿಯಲ್ಲಿ ನಡೆದಿದೆ.
ರಾಮನಾಯ್ಕ (72) ಆತ್ಮಹತ್ಯೆ ಮಾಡಿಕೊಂಡ ರೈತ. ಅನಂತವಾಡಿಯಲ್ಲಿರುವ ಸರ್ವೆ ನಂ. 488/2ರಲ್ಲಿ 2 ಎಕರೆ 5 ಗುಂಟೆ ಆಗುವಷ್ಟು ಜಮೀನು ಇದ್ದು, ಆ ಜಮೀನಿನಲ್ಲಿ ಶೇಂಗಾ ಮತ್ತು ಭತ್ತವನ್ನು ಬೆಳೆಯುತ್ತಿದ್ದರು. ಮಂಕಿಯ ವಿ.ಎಸ್.ಎಸ್ ಸೊಸೈಟಿಯಲ್ಲಿ ಕೃಷಿಗಾಗಿ 1 ಲಕ್ಷ ರೂಪಾಯಿ ಬೆಳೆ ಸಾಲ ಮಾಡಿದ್ದರು. ಬ್ಯಾಂಕ್ ಸಾಲ ತುಂಬಬೇಕು ಎಂದು ಮನೆಯಲ್ಲಿ ಹೇಳಿಕೊಂಡು ಉದ್ವೇಗಕ್ಕೊಳಗಾಗಿದ್ದರು ಎನ್ನಲಾಗಿದೆ.
ಆದರೆ, ಪ್ರಸಕ್ತ ವರ್ಷ ಬೆಳೆ ಸರಿಯಾಗಿ ಬಾರದೆ ಇದ್ದರಿಂದ ಸಾಲ ತುಂಬಲು ಪರದಾಟ ನಡೆಸಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದರು. ಈ ನಡುವೆ ಮಾರ್ಚ್ 27 ರಂದು ಸಂಜೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲವಾಗಿದ್ದನ್ನು ನೋಡಿ ವಿಷ ಸೇವಿಸಿದ್ದರು. ಅಸ್ವಸ್ಥನಾದವರಿಗೆ ಚಿಕಿತ್ಸೆಗೆ ಮುರ್ಡೇಶ್ವರದ ಆರ್ಎನ್ಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏ. 3ರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತನ ಮಗ ಸೋಮೇಶ್ವರ ನಾಯ್ಕ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅನಾರೋಗ್ಯಕ್ಕೊಳಗಾದ ಮಹಿಳಾ ಪಿಎಸ್ಐ ಸಾವು: ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಮಟಾ ಪಿಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಮಟಾದ ಕಾಗಲ್ ಮೂಲದ ಚಂದ್ರಮತಿ ಪಟಗಾರ ಮೃತ ದುರ್ದೈವಿ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿ ಕಳೆದ ಕೆಲ ವರ್ಷದಿಂದ ಹುಟ್ಟಿದ ಊರಾದ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅತಿಯಾದ ರಕ್ತದ ಒತ್ತಡ ಪರಿಣಾಮ ಕೋಮಾ ಸ್ಥಿತಿಗೆ ಜಾರಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಅಂಕೋಲಾದಲ್ಲಿ ಜೋರಾದ ಮಟ್ಕಾ ದಂಧೆ: ಅಂಕೋಲಾ ತಾಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ಮತ್ತೆ ಚಿಗುರುಗೊಂಡಿದೆ. ಚುನಾವಣೆ ನೀತಿ ಸಂಹಿತೆ ಪ್ರಕಟಗೊಳ್ಳುತ್ತಲೇ ಕೆಲವರ ಕೃಪಾಕಟಾಕ್ಷದಲ್ಲೇ ಮಟ್ಕಾ ದಂಧೆ ಪ್ರಾರಂಭಗೊಂಡಿದ್ದು. ಇತ್ತೀಚಿನ ವರ್ಷಗಳಲ್ಲಿ ಮಟ್ಕಾ ದಂಧೆಗೆ ತಾಲೂಕಿನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅಂಕೋಲಾದಲ್ಲಿ ಮೂವರು ಬುಕ್ಕಿಗಳ ನಡುವೆ ಮುಸುಕಿನ ಕಾದಾಟದ ಪರಿಣಾಮವಾಗಿ ಮಟ್ಕಾ ದಂಧೆ ಸ್ಥಗಿತಗೊಂಡಿತ್ತು. ಆದರೆ ನೀತಿ ಸಂಹಿತೆ ಪ್ರಕಟವಾದ ಮಾರನೆಯ ದಿನದಿಂದಲೇ ಪ್ರಭಾವಿ ನಾಯಕನೋರ್ವನ ಹಿಂಬಾಲಕರೋರ್ವರಿಗೆ ಮಟ್ಕಾ ಬುಕ್ಕಿಯ ಪಟ್ಟ ನೀಡಲಾಗಿದೆ. ಯಾವುದೇ ಅಳುಕಿಲ್ಲದೆ ಮಟ್ಕಾ ದಂಧೆ ಮತ್ತೆ ತನ್ನ ಇನ್ನಿಂಗ್ಸ್ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಇದಕ್ಕೆ ಬ್ರೇಕ್ ಹಾಕಬೇಕಿದೆ.
ಅಂಕೋಲಾದ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ: ಅಂಕೋಲಾ ಪಟ್ಟಣದ ಸಂತೆ ಮಾರ್ಕೆಟ್ನಲ್ಲಿ ಒಂದೇ ದಿನ ನಾಲ್ಕು ಮೊಬೈಲ್ ಕಳುವಾಗಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ. ಪಟ್ಟಣದ ರವೀಂದ್ರ ರಾಯ್ಕರ, ಕಿರಣ್ ಶೇಟ್ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಸಂತೆಗೆ ತರಕಾರಿ ತರಲು ಹೋದಾಗ ಮೊಬೈಲನ್ನು ಕಳ್ಳ ತನ್ನ ಚಾಣಾಕ್ಷ ಬುದ್ಧಿಯಿಂದ ಎಗರಿಸಿದ್ದಾನೆ.
ಮೊಬೈಲ್ ಕಳೆದುಕೊಂಡವರು ಮನೆಗೆ ಹೋಗಿ ಜೇಬಿನಲ್ಲಿ ಮೊಬೈಲ್ ಇಲ್ಲದಾಗಿದ್ದನ್ನು ಗಮನಿಸಿ ಮನೆಯವರಿಗೆ ವಿಚಾರಿಸಿದರೂ ಪತ್ತೆಯಾಗದ ಕಾರಣ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಇದೇ ತರಹ ಮತ್ತೆ 2 ಪ್ರಕರಣಗಳು ವರದಿಯಾಗಿವೆ. ತಮ್ಮ ದುಬಾರಿ ಮೊಬೈಲ್ ಕಳೆದುಕೊಂಡವರು ಇದೀಗ ನಗರದಲ್ಲಿ ಓಡಾಟಕ್ಕೂ ಆತಂಕ ಪಡುವಂತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಬೈಕ್ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ: ಸ್ಥಳದಲ್ಲೇ ಮೃತಪಟ್ಟ ತಂದೆ - ಮಗಳು