ಭಟ್ಕಳ: ತಾಲೂಕಿನ ಸಾಹಿತಿ, ಶಿಕ್ಷಕ ಶಿರಾಲಿಯ ಶ್ರೀಧರ ಶೇಟ್ ಅವರ ಫೇಸ್ ಬುಕ್ ಖಾತೆಯ ನಕಲು ಮಾಡಿ ಅವರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿದೆ. ಸ್ನೇಹಿತರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ ನಂತರ ತನ್ನ ಸಂಬಂಧಿಕರಿಗೆ ತೀವ್ರ ಅನಾರೋಗ್ಯ ಉಂಟಾಗಿದೆ, ಆಸ್ಪತ್ರೆಯ ಐಸಿಯು ನಲ್ಲಿ ದಾಖಲಾಗಿಸಲಾಗಿದ್ದು, ಹಣದ ಅವಶ್ಯಕತೆಯಿದೆ. ಗೂಗಲ್ ಪೇ ಮೂಲಕ ಕಳಿಸಿ ಎಂದು ಭಾವನಾತ್ಮಕ ಸಂದೇಶವನ್ನು ಮೆಸೆಂಜರ್ ಮೂಲಕ ಕಳುಹಿಸಲಾಗಿದೆ.
ಇದನ್ನು ನಂಬಿದ ಅವರ ಶಿಷ್ಯರು ಹಣ ಕಳುಹಿಸಿದ್ದಾರೆ. ಶ್ರೀಧರ ಶೇಟ್ ಅವರ ಹಲವು ಸ್ನೇಹಿತರು ಮತ್ತು ಶಿಕ್ಷಕರಿಗೂ ಇದೇ ರೀತಿ ಸಂದೇಶ ರವಾನೆಯಾಗಿದೆ. ಇದರ ಬಗ್ಗೆ ಸಂದೇಹ ಮೂಡಿ ಮುರ್ಡೇಶ್ವರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಗಿರುವ ಧನಂಜಯ, ಸ್ನೇಹಿತರಾದ ದೇವಿದಾಸ, ಶಿಕ್ಷಕರಾದ ನಾರಾಯಣ ನಾಯ್ಕ, ಹನುಮಂತ ನಾಯ್ಕ, ಕೇಶವ ಮೊಗೇರ ಮುಂತಾದವರು ಶ್ರೀಧರ ಶೇಟ್ ರನ್ನು ಸಂಪರ್ಕಿಸಿ ಅವರ ಹೆಸರಿನಲ್ಲಿ ಹಣ ಕೇಳಿರುವ ಸಂದೇಶದ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಅವರು ಫೇಸ್ ಬುಕ್ ನಕಲಿ ಖಾತೆಯನ್ನು ರದ್ದು ಪಡಿಸಿ, ತಮ್ಮ ಖಾತೆ ನಕಲಾಗಿರುವ ವಿಷಯವನ್ನು ಸ್ನೇಹಿತರಿಗೆ ತಿಳಿಸಿ ಅವರು ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಆಗ ಅವರ ಶಿಷ್ಯರೋರ್ವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಆ ನಕಲಿ ಖಾತೆಯ ಫೋನ್ ನಂಬರ್ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಇದೇ ನಂಬರ್ ಹೊಂದಿರುವ ಗೂಗಲ್ ಪೇ ಯ ಜಾಡನ್ನು ಹಿಡಿದು ಹೊರಟರೆ ಅದು ಹರಿಯಾಣದ ಸಂದೀಪ್ ಕುಮಾರ್ ಎಂದು ತೋರಿಸುತ್ತದೆ. ವಂಚಕ ಶೇಟ್ ಅವರ 148 ಸ್ನೇಹಿತರಿಗೆ ಈ ಸಂದೇಶವನ್ನು ಕಳುಹಿಸಿದ್ದಾನೆ. ಈ ಕುರಿತು ಕಾರವಾರದ ಸೈಬರ್ ಕ್ರೈಮ್ ಠಾಣೆಗೆ ದೂರನ್ನು ಸಲ್ಲಿಸಲಾಗಿದೆ.