ಕಾರವಾರ: ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲು ಒಲ್ಲೆ ಎನ್ನುತ್ತಿದ್ದ ಕಾರವಾರದ ಕಾಂಗ್ರೆಸಿಗರನ್ನು ಕೊನೆಗೂ ಮೈತ್ರಿ ಸರ್ಕಾರದ ನಾಯಕರು ತಣ್ಣಗಾಗಿಸಿದ್ದಾರೆ. ಇದರಿಂದ ಮಾಜಿ ಶಾಸಕ ಸತೀಸ್ ಸೈಲ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಮನಸ್ಸು ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಸತೀಸ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ. ನಮ್ಮ ವಿರುದ್ಧ ಅಪಪ್ರಚಾರ ಮಾಡಿ, ಮುಗಿಸಲು ಮುಂದಾದವರ ಪರ ಮತಯಾಚನೆ ಮಾಡಬೇಕು ಎಂದರೆ ಹೇಗೆ ಸಾಧ್ಯ? ಒಂದೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಅವರ ಕ್ಷೇತ್ರದಲ್ಲಿ ಅಥವಾ ಇನ್ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ ಅವರೂ ಪ್ರಚಾರ ಮಾಡುತ್ತಿರಲಿಲ್ಲ. ಆದರೂ ಇಕ್ಕಟ್ಟಿನ ಸ್ಥಿತಿ ಇದೀಗ ನಮ್ಮ ಕಾರ್ಯಕರ್ತರಿಗೆ ಬಂದಿದೆ ಎಂದು ಬೇಸರದಿಂದ ನುಡಿದರು.
ಈ ಹಿಂದೆ ಇದೇ ಆನಂದ್ ಅಸ್ನೋಟಿಕರ್ ಪಕ್ಷವನ್ನು ನಡು ಹಾದಿಯಲ್ಲಿ ಬಿಟ್ಟು ಹೋದರು. ಆಗ ನಾವು ಕಷ್ಟಪಟ್ಟು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಕಟ್ಟಿದ್ದೇವೆ. ಆದರೆ ಇದೀಗ ಬದ್ದ ವೈರಿಗೆ ಸಪೋರ್ಟ್ ಮಾಡಿದರೇ ನಮ್ಮ ಪಕ್ಷದ ಭವಿಷ್ಯ ಏನಾಗಬಹುದು? ಎಂದು ಅಸಮಾಧಾನ ಹೊರ ಹಾಕಿದರು.
ಆದರೆ ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಗಾಗಿ ಸಚಿವ ಆರ್. ವಿ. ದೇಶಪಾಂಡೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಫೋನ್ ಮೂಲಕ ಪ್ರಚಾರ ನಡೆಸುವಂತೆ ಕೋರಿದ್ದಾರೆ. ಹಾಗಾಗಿ ಪ್ರಚಾರ ಮಾಡುತ್ತೇವೆ. ಆದರೆ ಈ ಹಿಂದೆ ಹೇಳಿದಂತೆ, ಯಾವುದೇ ಕಾರಣಕ್ಕೂ ಈ ಅಭ್ಯರ್ಥಿಗೆ ನಮ್ಮ ಬೆಂಬಲ ಇಲ್ಲ. ಮೈತ್ರಿ ಧರ್ಮಕ್ಕೆ ಬೆಲೆಕೊಟ್ಟು, ಕಾರ್ಯಕರ್ತರ ಸಲಹೆಯಂತೆ ಕಾರವಾರದಲ್ಲಿ ಐದು ದಿನ ಹಾಗೂ ಅಂಕೋಲಾದಲ್ಲಿ ಐದು ದಿನ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.
ಕಾರವಾರದಲ್ಲಿ ನಿರ್ಮಾಣಗೊಂಡಿರುವ ಮೆಡಿಕಲ್ ಕಾಲೇಜಿಗಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಮಂಜೂರು ಮಾಡಿಸಿದ್ದೆ. ಆದರೆ ಇದೀಗ ಎಲ್ಲರೂ ತಾವೆ ಮಾಡಿಸಿದ್ದು ಎನ್ನುತ್ತಿದ್ದಾರೆ. ದಾಖಲೆಗಳನ್ನು ತೆಗೆದು ನೋಡಲಿ, ಯಾರು ತಂದಿರುವುದು ಎಂದು ಗೊತ್ತಾಗುತ್ತೆ. ಇನ್ನು ಅನಂತ್ ಕುಮಾರ್ ಹೆಗಡೆ 6 ಸಾವಿರ ಕೋಟಿ ತಂದಿದ್ಧೇನೆ ಎಂದು ಮೊನ್ನೆ ಭಾಷಣವೊಂದರಲ್ಲಿ ಹೇಳಿದ್ದಾರೆ. ಅವರು ಎಲ್ಲಿ ತಂದಿದ್ದು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.