ಕಾರವಾರ : ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 20 ಗಂಟೆಯಿಂದ ವಿದ್ಯುತ್ ಸ್ಥಗಿತಗೊಂಡ ಕಾರಣ ಸಾರ್ವಜನಿಕರು, ಉದ್ಯಮಿಗಳು ಪರದಾಡುವಂತಾಗಿದೆ.
ನಗರದಲ್ಲಿ ಬುಧವಾರ ಮಧ್ಯಾಹ್ನ ಭಾರಿ ಮಳೆಯಾಗಿದ್ದು, ನಗರದ ಬಾಂಡಿ ಶಿಟ್ಟಾ ಬಳಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಥಗಿತಗೊಂಡಿದ್ದು, ಕರೆಂಟ್ ಇಲ್ಲದೇ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಿದ್ದೆಯಿಲ್ಲದೆ ಜನರ ಪರದಾಟ:
ಬುಧವಾರ ಮಧ್ಯಾಹ್ನದಿಂದಲೆ ವಿದ್ಯುತ್ ಸ್ಥಗಿತಗೊಂಡ ಕಾರಣ ನಗರ ಪ್ರದೇಶದಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವಿಪರೀತ ಸೆಕೆ ಹಾಗೂ ಸೊಳ್ಳೆ ಕಾಟಕ್ಕೆ ಕಂಗೆಟ್ಟಿರುವ ಜನ ನಿದ್ದೆಯಿಲ್ಲದೇ ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಬಹುತೇಕರು ಊಟ ತಿಂಡಿಗೆ ಹೋಟೆಲ್ ಕಡೆ ಮುಖ ಮಾಡಿದ್ದರು. ಹೋಟೆಲ್ಗಳೂ ವಿದ್ಯುತ್ ಇಲ್ಲದ್ದಕ್ಕೆ ಬಾಗಿಲು ಮುಚ್ಚಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.
3 ಲಕ್ಷದ ಐಸ್ ಕ್ರೀಂ ಹಾನಿ:
ನಗರದಲ್ಲಿ ಸುಮಾರು 20 ಗಂಟೆಗಳ ಕಾಲ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸ್ಥಗಿತಗೊಳಿಸಿದ್ದರ ಪರಿಣಾಮ ಐಸ್ ಕ್ರೀಂ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ಭಾರಿ ಹಾನಿಯಾಗಿದೆ.
ಬುಧವಾರ ಮಧ್ಯಾಹ್ನವೇ ವಿದ್ಯುತ್ ತೆಗೆದಿದ್ದಾರೆ. ಈ ಕುರಿತು ಹೆಸ್ಕಾಂನವರನ್ನು ಸಂಪರ್ಕಿಸಿದರೆ ನಮ್ಮ ಕರೆಯನ್ನೇ ಸ್ವೀಕರಿಸಿಲ್ಲ. ಐಸ್ ಕ್ರೀಂ ಅಂಗಡಿ ಮತ್ತು ಫ್ಯಾಕ್ಟರಿಯಲ್ಲಿ ಸುಮಾರು 3 ಲಕ್ಷದ ಐಸ್ ಕ್ರೀಂ ಹಾನಿಯಾಗಿವೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪ್ರತಿ ವರ್ಷ ಮಳೆಗಾಲದಲ್ಲಿ ಹೆಸ್ಕಾಂ ನವರು ಇದೇ ರೀತಿ ಮಾಡುತ್ತಿದ್ದಾರೆ ಎಂದು ನ್ಯಾಚುರಲ್ ಐಸ್ ಕ್ರೀಂ ಅಂಗಡಿ ಮಾಲೀಕ ಚಂದ್ರಕಾಂತ್ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು.