ಕಾರವಾರ: ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಒತ್ತಾಯಿಸಿದೆ.
ಮಾಧ್ಯಮಗೋಷ್ಟಿ ನಡೆಸಿದ ಸಮಿತಿ ಸದಸ್ಯರು, ಇತ್ತೀಚಿನ ದಿನಗಳಲ್ಲಿ ಡ್ರಗ್ಸ್, ಗಾಂಜಾ ಸಾಗಾಟದ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಮಾರಕ ಡ್ರಗ್ಸ್ ಜಾಲದಿಂದ ಯುವಜನತೆಯನ್ನು ದೂರ ಇಡಬೇಕಾದ ಅಗತ್ಯತೆ ಇದ್ದು ಪೊಲೀಸ್ ಇಲಾಖೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದರು.
ಮಾದಕ ವಸ್ತುಗಳ ಕುರಿತು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮಗಳನ್ನು ಸಹ ವೇದಿಕೆ ವತಿಯಿಂದ ಆಯೋಜನೆ ಮಾಡಲಾಗುವುದು. ಆದರೆ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಬೇರು ಸಹಿತ ಕಿತ್ತೆಸೆಯಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಒತ್ತಾಯಿಸಿದರು.