ನವದೆಹಲಿ: ಇದೇ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತಮ ಭವಿಷ್ಯ ನಿರ್ಮಿಸಲು ಮತ ಚಲಾಯಿಸುವಂತೆ ಕೇರಳದ ವಯನಾಡ್ ಮತದಾರರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ಇಂದು ದಯಮಾಡಿ ಮತದಾನ ಮಾಡಿ. ಇದು ನಿಮ್ಮ ದಿನ. ನಮ್ಮ ಸಂವಿಧಾನವು ನಿಮಗೆ ನೀಡಿರುವ ದೊಡ್ಡ ಅಧಿಕಾರವನ್ನು ಚಲಾಯಿಸಿ. ಒಟ್ಟಿಗೆ ಉತ್ತಮ ಭವಿಷ್ಯ ನಿರ್ಮಿಸೋಣ" ಎಂದು ಕರೆ ನೀಡಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರವು ಮಾನಂತವಾಡಿ (ಎಸ್ಟಿ), ಸುಲ್ತಾನ್ ಬತ್ತೇರಿ (ಎಸ್ಟಿ), ಕಲ್ಪೆಟ್ಟಾ, ಕೋಯಿಕ್ಕೋಡ್ ಜಿಲ್ಲೆಯ ತಿರುವಂಬಾಡಿ ಮತ್ತು ಮಲಪ್ಪುರಂ ಜಿಲ್ಲೆಯ ಎರನಾಡ್, ನಿಲಂಬೂರ್ ಮತ್ತು ವಂಡೂರ್ ಎಂಬ 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್‌ನಂದ ಗೆಲುವು ಕಂಡಿದ್ದರು. ರಾಯಬರೇಲಿ ಕ್ಷೇತ್ರದಲ್ಲೂ ಅವರು ಗೆದ್ದಿರುವ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ಎದುರಿಸುತ್ತಿದ್ದಾರೆ.
ವಯನಾಡ್ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಉಪಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಿಪಿಐ(ಎಂ)ನಿಂದ ಸತ್ಯನ್ ಮೊಕೆರಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ನವ್ಯ ಹರಿದಾಸ್ ಸ್ಪರ್ಧಿಸುತ್ತಿದ್ದಾರೆ.
ರಾಹುಲ್ ಗಾಂಧಿ ಮನವಿ: "ಈ ಚುನಾವಣೆಯಲ್ಲಿ ನನ್ನ ಸಹೋದರಿ ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲು ಸಿದ್ಧವಾಗಿದ್ದಾರೆ. ಆಕೆ ಕೇವಲ ನಿಮ್ಮ ಪ್ರತಿನಿಧಿ ಮಾತ್ರವಲ್ಲ, ನಿಮ್ಮ ಸಹೋದರಿ, ಮಗಳು ಮತ್ತು ಸಲಹೆಗಾರ್ತಿ ಕೂಡಾ. ಹಾಗಾಗಿ, ಅವರನ್ನು ಬೆಂಬಲಿಸಲು ನೀವು ಮತದಾನ ಮಾಡಿ" ಎಂದು ಎಕ್ಸ್‌ನಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್ ಚುನಾವಣೆ: ರಾಂಚಿಯಲ್ಲಿ ಡ್ರೋಣ್ ಕಣ್ಗಾವಲಿನಲ್ಲಿ ಮತದಾನ