ಶಿರಸಿ: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರದಿಂದ ಕಠಿಣ ಲಾಕ್ಡೌನ್ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟದ ಮೇಲೆ ವಿಶೇಷ ಗಮನ ಹರಿಸಲು ಶಿರಸಿಯಲ್ಲಿ ಸೋಮವಾರದಿಂದ ಡ್ರೋನ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಶಿರಸಿ ಪೊಲೀಸ್ ಇಲಾಖೆಯ ವತಿಯಿಂದ ಡ್ರೋನ್ ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಮತ್ತು ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದ ವಿವಿಧೆಡೆಯ ದೃಶ್ಯಗಳನ್ನು ಚಿತ್ರೀಕರಿಸಿ, ವಿವಿಧ ಓಣಿ, ಗ್ರಾಮಗಳಲ್ಲಿ ಜನರ ಸಂಚಾರ, ದಟ್ಟಣೆ, ಅಂಗಡಿಗಳ ಕಾರ್ಯಾಚರಣೆಯ ಕುರಿತು ಮಾಹಿತಿ ಕಲೆಹಾಕಲಾಯಿತು.
ಡ್ರೋನ್ ಕಾರ್ಯಾಚರಣೆಯ ವೇಳೆ ನಗರದ ಗಾಂಧಿ ನಗರ ಹಾಗೂ ಕರೆ ಗುಂಡಿ ರಸ್ತೆಯ ಬಳಿ ಜನರು ವಾಲಿಬಾಲ್, ಕ್ರಿಕೆಟ್ ಆಟದಲ್ಲಿ ತೊಡಗಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆಗಳಲ್ಲಿ ಡ್ರೋನ್ ಹಾರಿಸಿ ಮನೆಯಿಂದ ಹೊರ ಬರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು... 600 ಸೋಂಕಿತರು ಕಣ್ಮರೆ!