ಭಟ್ಕಳ(ಉತ್ತರ ಕನ್ನಡ): ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ವೈದ್ಯರು ನಮಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದರು. ಹೀಗಂತ ಹೇಳ್ತಿರೋದು ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂವರು ನಿವಾಸಿಗಳು.
ಕೆಲವು ದಿನಗಳ ಹಿಂದೆ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಸೋಂಕಿತ ರೋಗಿ ಸಂಖ್ಯೆ 98 ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೋಂಕಿತ, ನಾವು ಆರೋಗ್ಯವಂತರಾಗಿ ಮರಳಿರುವುದಕ್ಕೆ ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ.
ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ವೈದ್ಯರು ಸಹ ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ಮೂಲಕ ನಾವು ಮತ್ತೆ ಬದುಕುಳಿಯುವಂತೆ ಮಾಡಿದೆ ಎಂದು ಮೂವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.