ಭಟ್ಕಳ: ತಾಲೂಕಿನ ಕಡು ಬಡವರು, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದವರು, ವಿಶೇಷಚೇತನರು, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದವರ ಕುಟುಂಬಗಳು ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಲಾಯಿತು.
ಅರ್ಜಿ ಸಲ್ಲಿಸಿದವರಲ್ಲಿ 96 ಫಲಾನುಭವಿಗಳಿಗೆ 20,15,730 ರೂ. ಮೊತ್ತದ ಪರಿಹಾರ ಚೆಕ್ನ್ನು ಶಾಸಕ ಸುನೀಲ ನಾಯ್ಕ ವಿತರಿಸಿದರು. ಈ ವೇಳೆ ಮಾತಾನಾಡಿದ ಅವರು, ಅರ್ಜಿ ಸಲ್ಲಿಸಿದವರಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪರಿಹಾರ ಮೊತ್ತ ವಿತರಿಸಲಾಗಿದೆ. ಅದೇ ರೀತಿ ನೆರೆ ಹಾವಳಿಯಿಂದಾಗಿ ಭಟ್ಕಳ-ಹೊನ್ನಾವರ ಕ್ಷೇತ್ರದ ಸಾಕಷ್ಟು ಮನೆಗಳು ನೀರುಪಾಲಾಗಿದ್ದವು. ಈ ನಿಟ್ಟಿನಲ್ಲಿ ಈಗಾಗಲೇ ಪರಿಹಾರ ರೂಪದಲ್ಲಿ ಒಟ್ಟು 72 ಮನೆಗಳ ಪುನರ್ ನಿರ್ಮಾಣಕ್ಕೆ ಎ ಹಾಗೂ ಬಿ ವರ್ಗವನ್ನಾಧರಿಸಿ ಪ್ರತೀ ಮನಗೆ ತಲಾ 5 ಲಕ್ಷ ರೂ.ಗಳನ್ನು ನೀಡಲಾಗಿದ್ದು, ಈಗಾಗಲೇ ಮನೆಯ ಪಾಯ ನಿರ್ಮಾಣಕ್ಕೆ 1 ಲಕ್ಷ ರೂ.ಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಜಿ.ಪಿ.ಎಸ್. ಆಧರಿಸಿ ಮುಂದಿನ ಹಂತದಲ್ಲಿ ಮನೆ ನಿರ್ಮಾಣಕ್ಕೆ ಪರಿಹಾರ ಹಣ ವಿತರಿಸಲಾಗುವುದು ಎಂದು ತಿಳಿಸಿದರು.
ಭಟ್ಕಳ, ಹೊನ್ನಾವರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 400ಕ್ಕೂ ಅಧಿಕ ಪರಿಹಾರ ಚೆಕ್ ವಿತರಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಸದುಪಯೋಗವಾಗಬೇಕೆಂಬ ಉದ್ದೇಶದಿಂದ ಫಲಾನುಭವಿಗಳ ಅರ್ಜಿ ಸ್ವೀಕಾರಕ್ಕೆ ಮೂವರು ಆಪ್ತ ಕಾರ್ಯದರ್ಶಿಗಳು ಕೆಲಸ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ತಾ.ಪಂ. ಸದಸ್ಯ ಹನುಮಂತ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ದಿನೇಶ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.