ಕಾರವಾರ (ಉತ್ತರ ಕನ್ನಡ ) : ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎದ್ದಿರುವ ಬಂಡಾಯ ಇದೀಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿರುವ ಕೈ ಪಕ್ಷ ಒಂದು ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದೆ. ಆದರೆ ಟಿಕೆಟ್ ಘೋಷಿಸಿರುವ ಕ್ಷೇತ್ರಗಳೂ ಸೇರಿದಂತೆ ಬಾಕಿ ಇರುವ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಮೊದಲ ಹಂತದಲ್ಲೇ ಉತ್ತರ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದ ಕಾಂಗ್ರೆಸ್, ಎರಡನೇಯ ಪಟ್ಟಿಯಲ್ಲಿ ಮತ್ತಿಬ್ಬರ ಹೆಸರನ್ನು ಪ್ರಕಟಿಸಿದೆ. ಆದರೆ ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಮಾತ್ರ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮ ಪ್ರಚಾರ ಆರಂಭಿಸಿದ್ದು ಇನ್ನೊಂದೆಡೆ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳೂ ಸಹ ಬಂಡಾಯವಾಗಿ ನಿಲ್ಲಲು ತಯಾರಿ ನಡೆಸಿದ್ದಾರೆ.
ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಮಾಜಿ ಶಾಸಕ ಸತೀಶ ಸೈಲ್‌ಗೆ ಪಕ್ಷ ಟಿಕೆಟ್ ಘೋಷಿಸಿದ್ದು, ಆಕಾಂಕ್ಷಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಈಗಾಗಲೇ ಕ್ಷೇತ್ರದಲ್ಲಿ ಓಡಾಟ ತೀವ್ರಗೊಳಿಸಿದ್ದಾರೆ. ತಮ್ಮ ಬೆಂಬಲಿಗರು, ಹಿತೈಷಿಗಳನ್ನು ಭೇಟಿಯಾಗಿ ಚುನಾವಣಾ ಪ್ರಚಾರ ಕೈಗೊಂಡಿರುವ ಚೈತ್ರಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷದ ಮೇಲೆ ಬೇಸರ ಇಲ್ಲವಾಗಿದ್ದು ಬೆಂಬಲಿಗರ ಆಶಯದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸೋದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಶಾಸಕ ವಿ.ಎಸ್.ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಸಮಾಧಾನಕ್ಕೆ ವ್ಯಕ್ತಪಡಿಸಿರುವ ಲಕ್ಷಣ ಬನ್ಸೋಡೆ, ಹೊರಗಿನಿಂದ ಬಂದು ಪಕ್ಷ ಸೇರ್ಪಡೆಗೊಂಡವರಿಗೆ ಟಿಕೆಟ್ ನೀಡಿರುವುದು ಮೂಲ ಕಾಂಗ್ರೆಸ್ಸಿಗರಿಗೆ ಬೇಸರ ಉಂಟುಮಾಡಿದೆ. ನಿಷ್ಠಾವಂತ ಕಾರ್ಯಕರ್ತರು ಇದ್ದಾಗಲೂ ಪಕ್ಷ ಹೊರಗಿನಿಂದ ಬಂದವರಿಗೆ ಅವಕಾಶ ನೀಡಿದ್ದು, ಇಷ್ಟು ವರ್ಷಗಳ ಕಾಲ ಪಕ್ಷವನ್ನ ಕಟ್ಟಿ ಬೆಳೆಸಿರುವ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತಾಗಿದೆ. ಕಳೆದ ಬಾರಿ ಪಕ್ಷದ ಹಿರಿಯರು ಮಾತು ಕೊಟ್ಟಿದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಈ ಬಾರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಖಚಿತ ಎಂದು ತಿಳಿಸಿದರು.
ಇದಷ್ಟೇ ಅಲ್ಲದೇ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧ ಕಾಂಗ್ರೆಸ್‌ನ ವೆಂಕಟೇಶ ಹೆಗಡೆ ಹೊಸಬಾಳೆ ತೊಡೆತಟ್ಟಿದ್ದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮೂರು ಕ್ಷೇತ್ರಗಳಲ್ಲಿ ಈಗಾಗಲೇ ಬಂಡಾಯ ವ್ಯಕ್ತವಾಗಿದ್ದು ಕುಮಟಾ ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವತ್ತ ಇದೀಗ ಎಲ್ಲ ಆಕಾಂಕ್ಷಿಗಳ ದೃಷ್ಟಿ ನೆಟ್ಟಿದೆ.
ಇದನ್ನೂ ಓದಿ : ಬಿಜೆಪಿಗೆ ಬಂಡಾಯದ ಬಿಸಿ: ಅಸಮಾಧಾನ ಶಮನಕ್ಕೆ ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ..!