ಭಟ್ಕಳ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಭಟ್ಕಳದಿಂದ ಮುರ್ಡೇಶ್ವರದ ತನಕ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ದೇವರ ದರ್ಶನ ಪಡೆದರು.
ರಂಜನ್ ಇಂಡೇನ್ ಏಜೆನ್ಸಿ ಹಾಗೂ ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸತತವಾಗಿ 10 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಾದಯಾತ್ರೆ ಈ ವರ್ಷವೂ ಯಶಸ್ವಿಯಾಗಿ ನೆರವೇರಿದೆ.
ಶುಕ್ರವಾರದಂದು ನಸುಕಿನ ಜಾವ 4 ಗಂಟೆಗೆ ಭಟ್ಕಳ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದು ಪಾದಯಾತ್ರೆ ಕೈಗೊಂಡ ಭಕ್ತರು, ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೇ ಬಸ್ ನಿಲ್ದಾಣದ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರದ ದೇವಸ್ಥಾನಕ್ಕೆ ತಲುಪಲಿದರು.
ದೇವರ ದರ್ಶನಕ್ಕೂ ಪೂರ್ವದಲ್ಲಿ ಸಮುದ್ರ ಸ್ನಾನ ಕೈಗೊಂಡ ಭಕ್ತರು, ಮುಂಜಾನೆ ನಸುಕಿನಲ್ಲಿ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದುಕೊಂಡರು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಬರಿಗಾಲಲ್ಲಿ ಯಾತ್ರೆ ನಡೆಸಿ ಶಿವ ನಾಮ ಸ್ಮರಣೆ ಮಾಡಿದರು.
ರಂಜನ್ ಇಂಡೇನ್ ಎಜೆನ್ಸಿ ಮಾಲೀಕರಾದ ಶಿವಾನಿ ಶಾಂತಾರಾಮ ಭಟ್ಕಳ, ಶಾಂತಾರಾಮ ಭಟ್ಕಳ ಇವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ತಾಲೂಕಿನ ವಿವಿಧ ಗ್ರಾಮೀಣ ಹಾಗೂ ನಗರ ಭಾಗದ ಸುಮಾರು 1,500ಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸಿದ್ದಾರೆ.