ಕಾರವಾರ (ಉತ್ತರ ಕನ್ನಡ): ಬಂಡಾಯದಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಕುಮಟಾ - ಹೊನ್ನಾವರ ಕ್ಷೇತ್ರದಲ್ಲಿ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಇಂದು ಸಾವಿರಾರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.
ಕುಮಟಾದ ಮೂರೂರು ಸರ್ಕಲ್ ಬಳಿ ಸೇರಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ಮೂಲಕ ಬೃಹತ್ ಮೆರವಣಿಗೆ ನಡೆಸಿ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು. ಬಳಿಕ ನಿವೇದಿತ್ ಆಳ್ವಾ ಚುನಾವಣಾ ಅಧಿಕಾರಿ ರಾಘವೇಂದ್ರ ಜಗಲಾಸರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬಂಡಾಯದ ನಡುವೆಯೂ ನಾಮಪತ್ರ ಸಲ್ಲಿಕೆ ಮಾಡಿರುವುದು ಕಂಡು ಬಂತು.
ನಾಮಪತ್ರ ಸಲ್ಲಿಕೆ ಬಳಿಕ ನಿವೇದಿತ್ ಆಳ್ವಾ ಹೇಳಿದ್ದೇನು?: ಇದೇ ವೇಳೆ, ಮಾತನಾಡಿದ ನಿವೇದಿತ್ ಆಳ್ವಾ ಅವರು, ''ನಾನು ಕಳೆದ 20 ವರ್ಷದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ನಾಯಕರು ಈ ಬಾರಿ ನನಗೆ ಟಿಕೆಟ್ ನೀಡಿದ್ದಾರೆ. ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಶಿಸ್ತು ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲದೇ ತಮ್ಮ ತಾಯಿ ಎಂಪಿ ಆಗಿದ್ದಾಗಲೂ ಅವರೊಂದಿಗೆ ಕೆಲಸ ಮಾಡಿದ ಅನುಭವವಿದೆ.
ಇದೇ ಕಾರಣಕ್ಕಾಗಿ ನನಗೆ ಕುಮಟಾ - ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗಿ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ಎಲ್ಲ ಪಕ್ಷದಲ್ಲಿಯೂ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿರುತ್ತದೆ. ಅದು ಇಲ್ಲದೇ ಇದ್ದಲ್ಲಿ ಪಕ್ಷ ಬಲಾಡ್ಯವಾಗಿ ಇರಲು ಸಾಧ್ಯವಿಲ್ಲ. ಹಾಗೆಯೇ ಟಿಕೆಟ್ ಘೋಷಣೆಯಾಗುವ ತನಕ ಆಸೆಗಳು ಇದ್ದೇ ಇರುತ್ತದೆ. ಬಳಿಕ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುತ್ತದೆ. ನಾನು ಕೂಡ 2008 ರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಕ್ಕಿಲ್ಲ. ಆದರೆ, ಟಿಕೆಟ್ ತಪ್ಪಿದರೂ ಕೂಡಾ ಕಾಂಗ್ರೆಸ್ ಪಕ್ಷವನ್ನು ನಾನು ತ್ಯಜಿಸಿಲ್ಲ. ಇದೇ ಕಾರಣಕ್ಕೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ'' ಎಂದು ಅವರು ಹೇಳಿದರು.
ಬಂಡಾಯ ಶಮನ ಮಾಡುತ್ತೇವೆ: ''ಬಂಡಾಯವನ್ನು ನಾವು ಶಮನ ಮಾಡುತ್ತೇವೆ. ಎಲ್ಲ ಪಕ್ಷದಲ್ಲಿಯೂ ಬಂಡಾಯ ಇರುತ್ತದೆ. ಆಕಾಂಕ್ಷಿಗಳ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಂಡು ಒಟ್ಟಾಗಿ ಚುನಾವಣೆ ಮಾಡುತ್ತೇವೆ. ಶಾರದಾ ಶೆಟ್ಟಿ ಅವರ ಮನೆಗೂ ತೆರಳಿ ಮಾತುಕತೆ ನಡೆಸಿದ್ದೇನೆ. ಅವರು ಮಾಜಿ ಎಂಎಲ್ಎ ಆಗಿದ್ದರಿಂದ ಅವರಿಗೂ ಆಸೆ ಇತ್ತು. ಆದರೆ, ಅವರನ್ನು ಮಾತನಾಡಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
''ನನಗೆ ಕುಮಟಾ ಕ್ಷೇತ್ರ ಹೊಸದಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಓಡಾಡಿದ್ದು, ಎಲ್ಲ ಸಮಸ್ಯೆಗಳ ಬಗ್ಗೆಯೂ ಅರಿವಿದೆ. ಅಲ್ಲದೇ ಪ್ರಸ್ತುತವಾಗಿ ಈಗಿನ ಸಮಸ್ಯೆ ಬಗ್ಗೆ ಪಟ್ಟಿ ಮಾಡಿ ತನ್ನದೇ ಆದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ. ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಜಮೀನು ವಿವಾದಕ್ಕಾಗಿ ಕೋರ್ಟ್, ಕಚೇರಿ ಅಲೆದಾಡಿ ಸುಸ್ತು: ಚುನಾವಣಾ ಅಖಾಡಕ್ಕಿಳಿದ 60ರ ಮಹಿಳೆ!