ಶಿರಸಿ: ಕದಂಬರ ನಾಡು, ಒಂದು ಕಾಲದಲ್ಲಿ ಕರ್ನಾಟಕದ ಪ್ರಥಮ ರಾಜಧಾನಿಯಾಗಿದ್ದ ಬನವಾಸಿ ಇದೀಗ ಸಾಮಾನ್ಯ ನಗರವಾಗಿ ಕಡೆಗಣಿಸಲ್ಪಟ್ಟಿದೆ ಎಂಬ ಬೇಸರ ಈ ಭಾಗದ ಜನರಿಗಿದೆ. ಗತಕಾಲದ ಇತಿಹಾಸದ ವೈಭವವನ್ನು ಸಾರುವ ಬನವಾಸಿಯನ್ನು ರಾಜಧಾನಿ ಬಿಡಿ, ತಾಲೂಕು ಕೇಂದ್ರವನ್ನಾಗಿ ಮಾಡಲು ಕೂಡ ಸರ್ಕಾರ ಆಸಕ್ತಿ ತೋರಿಸಿಲ್ಲ. ಈಗಾಲಾದರೂ ಬನವಾಸಿಯನ್ನು ತಾಲೂಕು ಕೆಂದ್ರವನ್ನಾಗಿ ಮಾಡಿ ಎಂದು ಬನವಾಸಿಗರು ಆಗ್ರಹಿಸುತ್ತಿದ್ದಾರೆ.
ಕದಂಬ ಕರ್ನಾಟಕದ ಪ್ರಪ್ರಥಮ ರಾಜಧಾನಿ. ಇದರ ಸ್ಥಾಪಕ ಮಯೂರವರ್ಮ. ಈತ ಕದಂಬ ಸಾಮ್ರಾಜ್ಯದ ಪ್ರಸಿದ್ಧ ದೊರೆ. ಈತನ ಕಾಲದಲ್ಲಿ ಬನವಾಸಿ ನಗರ ನಿರ್ಮಾಣವಾಗಿದ್ದು, ತನ್ನ ಪ್ರಥಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಎಂಬ ಉಲ್ಲೇಖವಿದೆ. ಇದಕ್ಕೆ ಪೂರಕವೆಂಬಂತೆ ಆದಿಕವಿ ಪಂಪ ಅಂಕುಶವಿಟ್ಟೊಡಮ್ ನೆನೆವುದೆನ್ನ ಮನಂ, ಬನವಾಸಿ ದೇಶಮಂ ಎಂದು ಬನವಾಸಿಯನ್ನು ವರ್ಣಿಸಿದ್ದಾನೆ. ಆಗಿನ ಕಾಲದಲ್ಲೇ ಪ್ರಸಿದ್ಧಿ ಹೊಂದಿದ ಬನವಾಸಿ ವಿಶಾಲವಾದ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಆದರೆ ಇಂದು ಸರ್ಕಾರಗಳಿಂದ ಬನವಾಸಿ ಕಡೆಗಣಿಸಲ್ಪಟ್ಟು, ಈಗಲೂ ಕೂಡ ಸಾಮಾನ್ಯ ನಗರವಾಗಿಯೇ ಉಳಿದಿದೆ ಎಂಬುದು ಇಲ್ಲಿನ ಜನರ ಆರೋಪ.
ಬನವಾಸಿ ಈಗ ವಿಶಾಲ ನಗರವಾಗಿ ಮಾರ್ಪಟ್ಟಿದೆ. ತಾಲೂಕಾ ಕೇಂದ್ರವನ್ನಾಗಿ ಮಾಡೋವಷ್ಟು ವಿಶಾಲತೆ ಹಾಗೂ ಜನಸಾಂದ್ರತೆಯನ್ನ ಕೂಡ ಹೊಂದಿದೆ. ಈಗಾಗಲೇ ತಾಲೂಕಾ ಮಟ್ಟದ ಕೆಲವು ಕಚೇರಿಗಳು ಕೂಡ ಇವೆ. ಪ್ರತ್ಯೇಕ ಪೊಲೀಸ್ ಠಾಣೆಯನ್ನ ಕೂಡ ನಿರ್ಮಿಸಲಾಗಿದ್ದು, ಬನವಾಸಿ ವಲಯದಲ್ಲಿ ಪಿಎಸ್ಐ ಕೂಡ ಇದ್ದಾರೆ. ತಾಲೂಕಾ ಕೇಂದ್ರ ಶಿರಸಿಯಿಂದ ಬನವಾಸಿ ಸುಮಾರು 30 ಕಿ.ಮೀ ದೂರವಿದ್ದು, ಪ್ರತಿಯೊಂದು ಕೆಲಸಕ್ಕೂ ಶಿರಸಿಗೆ ಹೋಗಿ ಬರುವ ಅನಿವಾರ್ಯತೆ ಇದೆ. ಅದರಲ್ಲಿಯೂ ಕದಂಬರ ಕಾಲದ ಕರ್ನಾಟಕದ ರಾಜಧಾನಿಯಾಗಿದ್ದ ನಗರಕ್ಕೆ ಒಂದು ತಾಲೂಕಿನ ಸ್ಥಾನಮಾನವೂ ಇಲ್ಲ ಎಂದರೆ ಹೇಗೆ ಎನ್ನುವುದು ಸ್ಥಳಿಯರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಪ್ರಸಿದ್ಧ ರಾಜಮನೆತನವೊಂದರ ರಾಜಧಾನಿಯಾಗಿದ್ದ ನಗರವೀಗ ಕಡೆಗಣಿಸಲ್ಪಟ್ಟಿದೆ. ಒಂದು ಕಡೆ ಶಿರಸಿ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದ್ರೆ, ಇದೇ ಸಮಯದಲ್ಲಿ ಬನವಾಸಿ ತಾಲೂಕಿನ ಕೂಗು ಕೂಡ ಜೋರಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಅಗ್ರಹವಾಗಿದೆ.