ಭಟ್ಕಳ (ಉತ್ತರಕನ್ನಡ): ತಾಲೂಕಿನ ಮಣ್ಕುಳಿಯಲ್ಲಿರುವ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ "ದಿ ಕಾಶ್ಮೀರ್ ಫೈಲ್ಸ್" ಚಿತ್ರ ಪ್ರದರ್ಶನ ಮಾಡುವಂತೆ ಆಗ್ರಹಿಸಿ ಭಟ್ಕಳದ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದರು.
"ರಾಧೆ ಶ್ಯಾಮ್" ಸ್ಥಗಿತಗೊಳಿಸಿ, ಹಿಂದೂ ಪಂಡಿತರ ನೈಜ ಚಿತ್ರಕತೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರದರ್ಶಿಸುವಂತೆ ಆಗ್ರಹಿಸಿ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದರು.
ಈ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಚಿತ್ರಮಂದಿರದ ಮೇಲ್ವಿಚಾರಕರ ನಡುವೆ ಮಾತುಕತೆ ನಡೆದು, ಕೊನೆಗೆ ರಾತ್ರಿ 8.45 ರ ಚಿತ್ರ ಪ್ರದರ್ಶನಕ್ಕೆ "ದಿ ಕಾಶ್ಮೀರ್ ಫೈಲ್ಸ್" ಚಿತ್ರವನ್ನು ಪ್ರದರ್ಶಿಸಲಾಗುವುದೆಂದು ಮೇಲ್ವಿಚಾರಕರರು ಭರವಸೆ ನೀಡಿದರು.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕಾಂಗ್ರೆಸ್ ಶಾಸಕ ಆಗ್ರಹ
ಈ ವೇಳೆ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಇತಿಹಾಸದಲ್ಲಿ ಮುಚ್ಚಿಟ್ಟಂತ ಕಾಶ್ಮೀರಿ ಪಂಡಿತರ ನೈಜ ಚಿತ್ರಕತೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗೆ ಅನಾವರಣ ಮಾಡಿದ್ದಾರೆ. ಆದರೆ ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ, ಹೌಸ್ ಫುಲ್ ಎಂಬ ಬೋರ್ಡ್ ಹಾಕುವ ಮೂಲಕ ಷಡ್ಯಂತರ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ "ದಿ ಕಾಶ್ಮೀರ್ ಫೈಲ್ಸ್" ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.