ಕಾರವಾರ : ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮಂಜೂರಾಗಿರುವ 400 ಮನೆಗಳ ಹಣವನ್ನು ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಸ್ವಸ್ತಗೊಂಡಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮಂಜೂರಾದ 400 ಮನೆಗಳ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ರಾಜೇಶ್ ನಾಯ್ಕ ಹಾಗೂ ಬೆಂಬಲಿಗರು ಕಳೆದ ಏಳು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಆದರೆ, ಇಂದು ಏಕಾಏಕಿ ಧರಣಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ ಆ್ಯಂಬುಲೆನ್ಸ್ಗೆ ಕರೆ ಮಾಡಲಾಗಿತ್ತು. ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ನಡೆಸಿದ ಸಿಬ್ಬಂದಿ ಬಿಪಿ ಹೆಚ್ಚಾದ ಕಾರಣ ಹೀಗಾಗಿದ್ದು, ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಓದಿ:ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರ ಬದುಕು: ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ
ಕಾರವಾರ ನಗರಸಭೆಗೆ ಹೌಸಿಂಗ್ ಕಾರ್ಪೊರೇಶನ್ನಿಂದ 8 ಕೋಟಿ ರೂ. ಪಾವತಿಸಬೇಕಾಸಗಿದೆ. 2019ರಿಂದ 2020ರ ತನಕ ಸುಮಾರು 400 ಬಡವರಿಗೆ ಮನೆಕಟ್ಟಲು 2.70 ಲಕ್ಷ ರೂ. ಮಂಜೂರಾಗಿದೆ.
ಆದರೆ, ಕೇಂದ್ರ ಸರ್ಕಾರ ನೀಡಬೇಕಾಗಿದ್ದ 1.5 ಲಕ್ಷ ರೂ. ಅನುದಾನ 400 ಬಡ ಜನರಿಗೆ ನೀಡದ ಕಾರಣ ಫಲಾನುಭವಿಗಳು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಅರ್ಹರಿಗೆ ಅನುದಾನ ಮಂಜೂರು ಮಾಡುವ ತನಕ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.