ಶಿರಸಿ(ಉತ್ತರ ಕನ್ನಡ): ಜುಲೈ ಕೊನೆಯ ವಾರದಲ್ಲಿ ಸುರಿದ ಮಹಾ ಮಳೆ ಜಿಲ್ಲೆಯಲ್ಲಿ ನೆರೆ ಮಾತ್ರ ಸೃಷ್ಟಿಸಿಲ್ಲ. ಅಗಾಧ ಭೂ ಕುಸಿತಕ್ಕೂ ಕಾರಣವಾಗಿದೆ. ಸುಂದರ ಪ್ರಕೃತಿಗೆ ಹೆಸರಾಗಿದ್ದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಈಗ ಮಳೆ ಬಂತೆಂದರೆ ಹೆದರುವಂತಾಗಿದೆ. ಕೊಡಗು, ಚಿಕ್ಕಮಗಳೂರು ಮುಂತಾದೆಡೆಯ ಸಂಭವಿಸುತ್ತಿದ್ದ ಮಹಾ ದುರಂತಗಳು ಉತ್ತರ ಕನ್ನಡದಲ್ಲೂ ನಡೆಯುವ ದಿನ ದೂರವಿಲ್ಲ ಎಂಬ ರೀತಿಯಲ್ಲಿ ಜನರಲ್ಲಿ ಭಯ ಹುಟ್ಟಿಸಿದ್ದು, ಸ್ಥಳೀಯವಾಗಿ ಆದಷ್ಟು ಶೀಘ್ರದಲ್ಲಿ ಅಧ್ಯಯನ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲೆಗೆ ಭೂ ಕುಸಿತ ಹೊಸದಲ್ಲ. 2009ರಲ್ಲಿ ಕಾರವಾರದ ಕಡವಾಡದಲ್ಲಿ ಭೂ ಕುಸಿತ ಉಂಟಾಗಿ 10 ಮನೆಗಳು, 19 ಜನ ನೆಲಸಮವಾಗಿದ್ದರು. 2017ರಲ್ಲಿ ಕುಮಟಾ ದುಂಡಕುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕ ಧರೆ ಕುಸಿದು ಮೂವರು ಮಕ್ಕಳು ಮೃತಪಟ್ಟಿದ್ದರು. ಆದರೆ, ಈ ಬಾರಿ ಕುಸಿತಗಳು ವ್ಯಾಪಕವಾಗಿದ್ದು, ಈ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿವೆ.
ಹಲವೆಡೆ ಭೂ ಕುಸಿತ:
ಈ ವರ್ಷ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲೇ ಹಲವು ಕಡೆಗಳಲ್ಲಿ ಭೂಮಿ ಕುಸಿತ ಉಂಟಾಗಿದೆ. ಊರಿನ 19 ಮಜರೆಗಳ 283 ಮನೆಗಳ ಸುಮಾರು 1 ಸಾವಿರ ಜನಸಂಖ್ಯೆ ಸಂಪೂರ್ಣ ರಸ್ತೆ ಸಂಪರ್ಕ ಕಳೆದುಕೊಂಡು ದ್ವೀಪದಂತಾಗಿವೆ. ಕೆಲ ಮನೆಗಳು, ಹತ್ತಾರು ಎಕರೆ ತೋಟ ಮಣ್ಣು ಪಾಲಾಗಿದೆ. ಅದೇ ರೀತಿ ಕದ್ರಾ-ಜೊಯಿಡಾ ನಡುವೆ ಅಣಶಿ ಘಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಧರೆ ಬಿದ್ದಿದೆ. ಅರಬೈಲ್ ಸಮೀಪದ ಡಬ್ಗುಳಿಯ ರಸ್ತೆ ಹಲ ವರ್ಷಹಳಿಂದ ಮಳೆಗಾಲದಲ್ಲಿ ಕುಸಿಯುತ್ತಲೇ ಇದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕವಾಗಿ ಧರೆ ಕಡಿದಿದ್ದರಿಂದ ಕಳೆದ ನಾಲ್ಕು ವರ್ಷದಲ್ಲಿ 20ಕ್ಕೂ ಹೆಚ್ಚು ಕಡೆ ಮಣ್ಣು ಜರಿದು ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕುಸಿತಕ್ಕೆ ಕಾರಣವೇನು?
ಈ ಮಹಾ ಕುಸಿತಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಹುಟ್ಟಿದ್ದು, ಇದಕ್ಕೆ ಪರಿಸರ ವಿಜ್ಞಾನಿಗಳು ಹೇಳುವಂತೆ, ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವ ಅರಣ್ಯ, ಹೆಚ್ಚುತ್ತಿರುವ ನೆಡುತೋಪುಗಳು, ರಸ್ತೆಗಳಿಗೆ ಅವೈಜ್ಞಾನಿಕವಾಗಿ ಗುಡ್ಡ ಕಡಿತ, ರೈಲ್ವೆ ಯೋಜನೆಗಳು, ಅಣೆಕಟ್ಟೆಗಳ ನಿರ್ಮಾಣ, ಗುಡ್ಡ ಕಡಿದು ತೋಟ, ಕೃಷಿ ಮುಂತಾದವುಗಳು ಜಿಲ್ಲೆಯ ಗುಡ್ಡಗಳಿಗೆ ಅಪಾಯ ತಂದೊಡ್ಡುತ್ತಿವೆ. ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಸಂಭವಿಸುತ್ತಿರುವ ಭೂ ಕುಸಿತದ ಬಗ್ಗೆ ಜೀವ ವೈವಿಧ್ಯ ಮಂಡಳಿ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ. ಇದರಲ್ಲಿ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ.
ಒಟ್ಟಾರೆ ಉತ್ತರ ಕನ್ನಡದಲ್ಲಿ ಭೂ ಕುಸಿತ ಗಂಭೀರ ಸ್ವರೂಪ ಪಡೆಯುತ್ತಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳೇ ಭೂಗರ್ಭ ತಜ್ಞರನ್ನು ಕರೆಯಿಸಿ ಅಧ್ಯಯನ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಇದು ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರಬೇಕೆನ್ನುವುದು ಎಲ್ಲರ ಬೇಡಿಕೆಯಾಗಿದ್ದು, ಪಶ್ಚಿಮ ಘಟ್ಟಗಳ ತಪ್ಪಲಿನ ನಿಸರ್ಗ ಕಾಪಾಡುವುದು ಎಲ್ಲರ ಕರ್ತವ್ಯವೂ ಆಗಿದೆ.
ಇದನ್ನೂ ಓದಿ: ನೇತ್ರಾವತಿ ನದಿಯಲ್ಲಿ ತೇಲಿ ಬಂತು ಯುವತಿ ಶವ : ಸಮುದ್ರ ಸೇರುವುದನ್ನು ತಪ್ಪಿಸಿದ ಮೀನುಗಾರರು