ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈಗಾಗಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಯಾವುದೇ ಅಕ್ರಮ, ನಿಯಮ ಉಲ್ಲಂಘನೆಯಂತಹ ಕ್ರಮಗಳನ್ನು ತಡೆಯಲು ಮುನಗನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಇನ್ನು, ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮತಗಟ್ಟೆಯ ಎಲ್ಲ ಅಧಿಕಾರಿಗಳಿಗೆ ಒಂದು ಹಂತದ ತರಬೇತಿ ನೀಡಲಾಗಿದೆ. ಇನ್ನು, ಎರಡು ಹಂತದಲ್ಲಿ ತರಬೇತಿ ನೀಡಿ ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ನಿರ್ಭೀತಿಯ ಮತದಾನಕ್ಕೆ ಕ್ರಮಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಲಕ್ಷ್ಮಣ ಬನಸೋಡೆ ಎರಡು ನಾಮಪತ್ರಗಳ ಪೈಕಿ ಕಾಂಗ್ರೆಸ್‌ನಿಂದ ಸಲ್ಲಿಸಿದ ನಾಮಪತ್ರಕ್ಕೆ ಬಿ-ಫಾರಂ ನೀಡದ ಕಾರಣ ತಿರಸ್ಕೃತವಾಗಿದೆ. ಉಳಿದಂತೆ 19 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದರು.