ಭಟ್ಕಳ : ಲಾಕ್‌ಡೌನ್ ಸಂದರ್ಭದಲ್ಲಿ ಆರೋಗ್ಯ ಸಂಬಂಧಪಟ್ಟ ಹಾಗೂ ಸೋಂಕಿತರ ಬಗೆಗಿನ ಮಾಹಿತಿಯನ್ನು ಜಿಲ್ಲಾಡಳಿತ, ತಾಲೂಕಾಡಳಿತ ವೀಕ್ಷಣೆ ಹಾಗೂ ಮೇಲ್ವಿಚಾರಣೆ ಮಾಡುತ್ತಿದೆ. ಸದ್ಯ ಭಟ್ಕಳದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾದ ಹಿನ್ನೆಲೆ ಕೊರೊನಾ ವೈರಸ್ ತಡೆ ಹಾಗೂ ಜನರ ಓಡಾಟ ಕಡಿವಾಣಕ್ಕೆ ಪೊಲೀಸ್ ಇಲಾಖೆಗೆ ಇದರ ಉಸ್ತುವಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್ ಕೆ ತಿಳಿಸಿದ್ದಾರೆ.
ತಾಲೂಕಾಡಳಿತ, ಪೊಲೀಸ್ ಇಲಾಖೆಯೊಂದಿಗೆ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸದ್ಯ ಭಟ್ಕಳದ ಸ್ಥಿತಿಗತಿಗಳ ಎಲ್ಲಾ ಮೇಲ್ವಿಚಾರಣೆ ಪೊಲೀಸ್ ಇಲಾಖೆ ನಿಯಂತ್ರಿಸಲಿದ್ದು, ಲಾಕ್‌ಡೌನ್ ಬಿಗಿಗೊಳಿಸಿ ಜನರ ಓಡಾಟ ಕಡಿವಾಣವನ್ನು ಅವರೇ ವಹಿಸಿಕೊಂಡು ಕಾರ್ಯ ಮಾಡಲಿದ್ದಾರೆ.
ಜಿಲ್ಲಾಡಳಿತ, ತಾಲೂಕಾಡಳಿತ ಇಷ್ಟು ದಿನದಲ್ಲಿ ಎಲ್ಲವನ್ನು ಮೇಲ್ವಿಚಾರಣೆಯಲ್ಲಿದ್ದ ಹಿನ್ನೆಲೆ ಕೆಲಸವನ್ನು ವಿಂಗಡಣೆ ಮಾಡಲಾಗಿದೆ. ಸದ್ಯ ಕೊರೊನಾ ಪ್ರಮಾಣ ಭಟ್ಕಳದಲ್ಲಿ ಹೆಚ್ಚಾದ ಹಿನ್ನೆಲೆ ಸೋಂಕಿತರ ಜೊತೆಯಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ವ್ಯಕ್ತಿಗಳ ಬಗೆಗಿನ ಮಾಹಿತಿ ಕಲೆಹಾಕಿ ಅವರನ್ನು ಕ್ವಾರಂಟೈನ್ ಮಾಡಿ ಅವರ ಮೇಲೆ ನಿಗಾ ಇರಿಸುವುದಾಗಿದೆ ಎಂದರು.
ಅದರಲ್ಲೂ ಮತ್ತೆ ಏರಿಕೆಗೊಂಡ ಕೊರೊನಾ ಸೋಂಕಿನಲ್ಲಿ ಹೆಚ್ಚಾಗಿ ಮಹಿಳೆಯರು, ಚಿಕ್ಕ ಮಕ್ಕಳು ಹಾಗೂ ವೃದ್ಧರಿದ್ದಾರೆ. ಅವರೆಲ್ಲರ ಸಂಪರ್ಕದೊಂದಿಗೆ ಓರ್ವ ವಯಸ್ಕರ ಸಂಪರ್ಕವನ್ನೂ ಪತ್ತೆ ಮಾಡಬೇಕಾಗಿದೆ. ಎಲ್ಲಿಯೂ ತಾಲೂಕಾಡಳಿತಕ್ಕೆ ಹೊರೆಯಾಗಬಾರದೆಂಬ ದೃಷ್ಠಿಯಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರು ಈ ಬಗ್ಗೆ ತಾಲೂಕಾಡಳಿತಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಆಯಾ ಸಂದರ್ಭಕ್ಕೆ ತಕ್ಕಂತೆ ಕೊರೊನಾ ನಿಯಂತ್ರಣದ ತೀರ್ಮಾನ ಮಾಡಲಿದ್ದು, ಜಿಲ್ಲಾ ಕೇಂದ್ರದಲ್ಲಿ ಕುಳಿತು ತೆಗೆದುಕೊಳ್ಳುವ ತೀರ್ಮಾನ ಇದಕ್ಕೆ ಉಪಯುಕ್ತವಾಗುವುದಿಲ್ಲ. ಹಾಗಾಗಿ ತುಂಬಾ ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಸೂಚಿಸಿದರು.