ಕಾರವಾರ: ಬಸ್ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯವಹಿಸುತ್ತಿದ್ದ ಪಶು ವೈದ್ಯಾಧಿಕಾರಿ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಜೊಯಿಡಾ ತಾಲೂಕಿನ ನಂದಿಗದ್ದಾದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಜಿಲ್ಲಾಧಿಕಾರಿಗೆ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರ್ಚನಾ ಸಿನ್ಹಾ ವಿರುದ್ಧ ಗ್ರಾಮಸ್ಥರು ದೂರು ಸಲ್ಲಿಸಿದರು.
ಕಳೆದ ಆರು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಒಂದು ದಿನವೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದಿಲ್ಲ. ಕೇಳಿದ್ರೆ ಕಾಡಿನಲ್ಲಿರುವ ಗ್ರಾಮ, ಒಬ್ಬರೆ ಬರಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲದೆ, ಗ್ರಾಮಕ್ಕೆ ಸರಿಯಾದ ಬಸ್ ಸೌಕರ್ಯ ಇಲ್ಲ. ಮಧ್ಯಾಹ್ನಕ್ಕೆ ಒಂದು ಬಸ್ ಬರಲಿದ್ದು, ಒಂದು ಗಂಟೆ ಬಳಿಕ ಅದೇ ಬಸ್ಗೆ ವಾಪಸ್ ತೆರಳುತ್ತಾರೆ. ಇದರಿಂದಾಗಿ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇವರಿಂದ ಸೇವೆ ನೀಡಲು ಸಾಧ್ಯವಾಗದಿದ್ದರೆ ವರ್ಗಾಯಿಸಿ ಬೇರೆಯವರನ್ನು ನಿಯುಕ್ತಿಗೊಳಿಸುವಂತೆ ಒತ್ತಾಯಿಸಿದರು.
ಈ ಹಿನ್ನೆಲೆ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.