ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಗರದ ನಾಲ್ಕು ಬಿಸಿಎಂ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಕುರ್ಸಾವಾಡದ ವೃತ್ತಿಪರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಮೆಟ್ರಿಕ್ ನಂತರದ ಸಾಮಾನ್ಯ ಮತ್ತು ಮಾದರಿ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಈ ವೇಳೆ, ಹಾಸ್ಟೆಲ್ ಶೌಚಾಲಯ ಹಾಗೂ ಕೊಠಡಿ ಸ್ವಚ್ಛತೆ ಇಲ್ಲದೇ ಇರುವುದಕ್ಕೆ ಅಸಮಾಧಾನಗೊಂಡು, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಬಳಿಕ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಅವರು ವಿದ್ಯಾರ್ಥಿಗಳ ಜತೆಗೆ ಕುಳಿತು ಊಟ ಮಾಡಿ ಸಮಸ್ಯೆ ಆಲಿಸಿದರು. ಈ ವೇಳೆ, ಗಡಿಯಲ್ಲಿರುವ ಮಾಜಾಳಿಯ ಇಂಜಿನಿಯರಿಂಗ್ ಕಾಲೇಜಿಗೆ ತೆರಳಲು ಬಸ್ ಸಮಸ್ಯೆ ಕುರಿತು ವಿದ್ಯಾರ್ಥಿಗಳು ತಿಳಿಸಿದಾಗ ಸಂಬಂಧಪಟ್ಟ ಅಧಿಕಾರಿಗೆ ಸ್ಥಳದಲ್ಲೇ ಸಂಪರ್ಕಿಸಿ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದರು.
ಇದನ್ನೂ ಓದಿ: ನಿವೃತ್ತ ಸಿಎಸ್ ಜಾಧವ್ ತಾಯಿಗೆ ಭೂ ಮಂಜೂರು ಪ್ರಕರಣ: ಆರೋಪಿ ಅಧಿಕಾರಿಗೆ ಜಾಮೀನು
ಹಳೆ ನೆನಪು ಮೆಲುಕು ಹಾಕಿದ ಜಿಲ್ಲಾಧಿಕಾರಿ: ತಾವು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ಬಿಸಿಎಂ ಹಾಸ್ಟೆಲ್ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಜಿಲ್ಲಾಧಿಕಾರಿ ತಮಿಳುನಾಡಿನಲ್ಲಿ ಸರ್ಕಾರಿ ಸೀಟ್, ಹಾಸ್ಟೆಲ್ ಸಿಗಲಿಲ್ಲ ಎಂದರೆ ಆತ ಯಾವುದಕ್ಕೂ ಬೇಡ ಎಂದರ್ಥ ಎಂದು ಭಾವಿಸುತ್ತಾರೆ ಎಂದರು.
ನಾನೂ ಕೂಡ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವನು. ಐಎಎಸ್ ಮಾಡುವ ತವಕದಿಂದ ತರಬೇತಿಗಾಗಿ ಸೇರಿದಾಗ ಐಐಟಿ ಯಂತಹ ಉನ್ನತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ತರಬೇತಿಗೆ ಬಂದಿದ್ದರು. ಓದುವ ಹಂಬಲ ಆಸಕ್ತಿ ಇದ್ದರೆ, ಯಾರು ಏನು ಬೇಕಾದರೂ ಸಾಧಿಸಬಹುದು. ನಿಮ್ಮಲ್ಲೂ ಉತ್ತಮ ಪ್ರತಿಭೆಗಳು ಇರುತ್ತವೆ. ಹೀಗಾಗಿ ಅಧ್ಯಯನ ಮಾಡಿದರೆ ಸಾಧನೆ ಮಾಡಬಹುದು ಎಂದರು. ಅಲ್ಲದೇ ವಿದ್ಯಾರ್ಥಿಗಳಿಗೆ ಸಾಮೂಹಿಕ ಅಧ್ಯಯನ ಹಾಗೂ ವಿಚಾರ ವಿನಿಮಯಕ್ಕೆ ಸಾಮೂಹಿಕ ಗುಂಪು ರಚಿಸುವಂತೆ ಅವರು ಸಲಹೆ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ