ಕಾರವಾರ: ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರ ಜಿಲ್ಲೆಯ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಭಟ್ಕಳ ತಾಲೂಕಿನ ಮುರುಡೇಶ್ವರದ ಲಾಡ್ಜ್ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ.22 ರಂದು ಕೋಲಾರದ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದಿಂದ ಅದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದರು. ನಿತ್ಯ ಪಾದ ಪೂಜೆಗೆ ಆಗಮಿಸುತ್ತಿದ್ದ ಯುವತಿಯನ್ನು ಮರಳು ಮಾಡಿ ಸ್ವಾಮೀಜಿ ಪರಾರಿಯಾಗಿದ್ದರು. ಯುವತಿ ಹಾಗೂ ಸ್ವಾಮೀಜಿ ಕಣ್ಮರೆಯಾದ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸ್ವಾಮೀಜಿ ಹಾಗೂ ಯುವತಿಗಾಗಿ ತಿರುಪತಿ, ಹಾವೇರಿ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದರು. ಪದೇ ಪದೆ ಜಾಗ ಬದಲಿಸುತ್ತಿದ್ದ ಇಬ್ಬರ ಮೊಬೈಲ್ ನೆಟ್ವರ್ಕ್ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಕಳೆದ ಎರಡು ದಿನದಿಂದ ಮುರುಡೇಶ್ವರದ ಲಾಡ್ಜ್ವೊಂದರಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಮುರುಡೇಶ್ವರ ಹಾಗೂ ಕೋಲಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸ್ವಾಮೀಜಿ ಹಾಗೂ ಯುವತಿಯನ್ನು ವಶಕ್ಕೆ ಪಡೆದಿದ್ದು, ಕೋಲಾರಕ್ಕೆ ಕರೆದೊಯ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.