ಕಾರವಾರ: ನವರಾತ್ರಿ ಅಂದಾಕ್ಷಣ ಕರಾವಳಿ ನಗರಿ ಕಾರವಾರದ ಜನತೆಗೆ ಮೊದಲು ನೆನಪಾಗೋದು ದಾಂಡಿಯಾ. ಕೇವಲ ಗುಜರಾತ್, ಮಹಾರಾಷ್ಟ್ರ ಭಾಗದಲ್ಲಿ ಆಚರಣೆಯಲ್ಲಿರುವ ಈ ದಾಂಡಿಯಾ, ಗರ್ಬಾ ನೃತ್ಯವನ್ನು ಕಾರವಾರಿಗರೂ ಸಹ ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ನವರಾತ್ರಿಯ ಒಂಭತ್ತು ದಿನಗಳ ಕಾಲವೂ ನಗರದ ವಿವಿಧೆಡೆ ದಾಂಡಿಯಾ ಆಯೋಜಿಸುವ ಮೂಲಕ ಜನರು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಗಮನ ಸೆಳೆಯುತ್ತಿದ್ದಾರೆ.
ಉತ್ಸವದ ನಿಮಿತ್ತ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ನಿತ್ಯವೂ ಆಡುವ ಮೂಲಕ ಜನರು ಸಂಭ್ರಮಿಸ ತೊಡಗಿದ್ದಾರೆ. ಪ್ರತಿ ವರ್ಷ ನವರಾತ್ರಿ ಬಂದಾಗ ನಗರದ ವಿವಿಧೆಡೆ ರಾತ್ರಿ ವೇಳೆ ದಾಂಡಿಯಾ ನೃತ್ಯವನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗುತ್ತದೆ. ಕಾರವಾರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಆಯೋಜಕರು ದಾಂಡಿಯಾ ನೃತ್ಯವನ್ನು ಆಯೋಜಿಸುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುವುದು ವಿಶೇಷವಾಗಿದೆ.
ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್‌ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನು ಕಳೆದ ಕೆಲ ವರ್ಷದಿಂದ ಕಾರವಾರದ ಜನ ತಮ್ಮದೇ ಸಂಪ್ರದಾಯದಂತೆ ವಿಜ್ರಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ. ನಗರದ ದೇವಳಿವಾಡದಲ್ಲಿ ಕಳೆದ 16 ವರ್ಷಗಳಿಂದ ದಾಂಡಿಯಾ ಆಯೋಜಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಅದ್ದೂರಿಯಾಗಿ ನಡೆಯುತ್ತಿದೆ.
ನವರಾತ್ರಿ ಉತ್ಸವದ ಹಿನ್ನೆಲೆ ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿಮಾತಾ, ಕುಂಠಿ ಮಹಾಮಾಯಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾವನ್ನು ಆಯೋಜಿಸಲಾಗುತ್ತದೆ. ಇಲ್ಲಿ ತಲೆಯ ಮೇಲೆ ಕಳಸ ಹೊತ್ತು ಆಡುವ ಗರ್ಬಾ ನೃತ್ಯವನ್ನು ಸಹ ಮಾಡಲಾಗುತ್ತದೆ. ದಾಂಡಿಯಾ ಜೊತೆಗೆ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸುವುದರಿಂದ ಎಲ್ಲರೂ ನೃತ್ಯ ಆಡಿ ಸಂಭ್ರಮಿಸುತ್ತಾರೆ.
ಈ ನೃತ್ಯದಲ್ಲಿ ಯಾವುದೇ ಜಾತಿ ಧರ್ಮ ಭೇದಭಾವವಿಲ್ಲದೇ ಮಹಿಳೆಯರು ಮಕ್ಕಳು, ಪುರುಷರು ಒಟ್ಟಾಗಿ ಪಾಲ್ಗೊಂಡು ಸಂತಸಪಡುತ್ತಾರೆ. ಕಾರವಾರದ ದೇವಳಿವಾಡ, ಸೋನಾರವಾಡ, ಕಳಸವಾಡ ಸೇರಿದಂತೆ ವಿವಿಧೆಡೆ ಆಯೋಜಿಸುವ ದಾಂಡಿಯಾದಲ್ಲಿ ನಗರದ ವಿವಿಧ ಭಾಗಗಳ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ದಾಂಡಿಯಾ ಆಡುವುದಕ್ಕೆ ಎಷ್ಟು ಜನ ಸೇರುತ್ತಾರೋ ನೋಡುವುದಕ್ಕೂ ಕೂಡ ಅದಕ್ಕಿಂತಲೂ ಹೆಚ್ಚಿನ ಜನ ಸೇರುತ್ತಾರೆ. ಇದರಿಂದ ದಸರಾ ಹತ್ತಿರ ಬರುತ್ತಿದ್ದಂತೆ ಖುಷಿಯಾಗುತ್ತದೆ ಎನ್ನುತ್ತಾರೆ ದಾಂಡಿಯಾದಲ್ಲಿ ಪಾಲ್ಗೊಂಡಿದ್ದವರು. ಒಟ್ಟಾರೆ, ಕಾರವಾರದಲ್ಲಿ ಜನರು ನವರಾತ್ರಿ ಉತ್ಸವನ್ನು ದಾಂಡಿಯಾ ನೃತ್ಯದ ಮೂಲಕ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: 30 ಲಕ್ಷ ವಿದ್ಯುತ್ ದೀಪಗಳಿಂದ ಮಂಗಳೂರಿಗೆ ಸಿಂಗಾರ- ವಿಡಿಯೋ