ಕಾರವಾರ : ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಯುವಕನೋರ್ವ ಯಾತ್ರೆಗೆ ಹೊರಟಿದ್ದು, ಶನಿವಾರ ಕಾರವಾರಕ್ಕೆ ಭೇಟಿ ನೀಡಿದರು.
ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು ದೆಹಲಿಯ ಗಡಿಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆ ವರ್ಷ ಪೂರೈಸಿದೆ. ಆದರೆ, ಇನ್ನೂ ರೈತರ ಪ್ರತಿಭಟನೆ, ಹೋರಾಟ ನಿಂತಿಲ್ಲ. ಸರ್ಕಾರ ಮೂರು ನೂತನ ತಿದ್ದುಪಡಿಗಳನ್ನು ಹಿಂಪಡೆಯುವವರೆಗೆ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ.
ಈ ನಡುವೆ ರೈತರಿಗೆ ಬೆಂಬಲ ಸೂಚಿಸಲು ಹಾಗೂ ಪರಿಸರ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹರಿಯಾಣ ಮೂಲದ ಕರಮ್‌ವೀರ್ ಎಂಬ ಯುವ ಕೃಷಿಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಯಾತ್ರೆ ಹೊರಟಿದ್ದು, ಶನಿವಾರ ಗೋವಾ ಮೂಲಕ ಕಾರವಾರಕ್ಕೆ ಆಗಮಿಸಿ ಮುಂದೆ ಪ್ರಯಾಣ ಬೆಳೆಸಿದ್ದಾರೆ.
ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಊರಿನಲ್ಲಿ ಎಂಟು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೆ. ಆದರೆ, ರೈತರ ಹೋರಾಟಗಳಿಂದ ಪ್ರೇರೇಪಿತನಾಗಿ ಅವರಿಗೆ ಬೆಂಬಲ ಸೂಚಿಸಿ ಆ.30ರಂದು ಕಾಶ್ಮೀರದ ಕಾರ್ಗಿಲ್ ನಿಂದ ಸೈಕಲ್ ಯಾತ್ರೆ ಹೊರಟಿದ್ದೇನೆ.
ಈಗಾಗಲೇ ಲುಧಿಯಾನ, ಹರಿಯಾಣ, ಜೈಪುರ, ಅಜ್ಮೇರ್, ಗುಜರಾತ್, ಮಹಾರಾಷ್ಟ್ರ, ಗೋವಾ ಮುಗಿಸಿ ಕಾರವಾರ ತಲುಪಿದ್ದು, ದಿನಕ್ಕೆ ನೂರು ಕಿಲೋ ಮೀಟರ್ ನಷ್ಟು ಸೈಕಲ್ ನಲ್ಲಿ ತೆರಳುತ್ತಿದ್ದೇನೆ.
ಇದೀಗ ಉಡುಪಿಗೆ ತೆರಳಲಿದ್ದು ಬಳಿಕ 50 ದಿನಗಳಲ್ಲಿ ದಕ್ಷಿಣ ಕನ್ನಡದ ಮೂಲಕ ಕೇರಳಕ್ಕೆ ತೆರಳಿ ಕನ್ಯಾಕುಮಾರಿಯಲ್ಲಿ ತಮ್ಮ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸುವುದಾಗಿ ಕರಮ್‌ವೀರ್ ಅವರು ತಿಳಿಸಿದರು.