ಶಿರಸಿ: ಮೊಸಳೆ ಕೆರೆಯಲ್ಲೋ, ನದಿಯಲ್ಲೋ ಅಥವಾ ಇನ್ಯಾವುದೋ ನದಿ ತೀರದ ಕಬ್ಬಿನ ಗದ್ದೆಯಲ್ಲಿ ಇದ್ದುದನ್ನು ನೋಡಿರುತ್ತೇವೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಮೊಸಲು ಅಚ್ಚರಿ ಎಂಬಂತೆ ಆಹಾರ ಹುಡುಕುತ್ತಾ ನದಿ ಭಾಗದಿಂದ ಗ್ರಾಮಕ್ಕೆ ನುಗ್ಗಿದ ಘಟನೆ ದಾಂಡೇಲಿ ತಾಲೂಕಿನ ಕೊಗಿಲಬನ ಗ್ರಾಮದಲ್ಲಿ ಇಂದು ನಡೆದಿದೆ.
ಬೆಳ್ಳಂಬೆಳಗ್ಗೆ ರಸ್ತೆಯ ಮೇಲೆ ಮೊಸಳೆ ವಿಹಾರ:
ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆ ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ, ರಸ್ತೆಯಲ್ಲಿ ವಾಕ್ ಮಾಡಿದೆ. ಬೆಳ್ಳಂಬೆಳಗ್ಗೆ ಗ್ರಾಮದಲ್ಲಿ ಓಡಾಡುತ್ತಿದ್ದ ಮೊಸಳೆಯನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೆಲವರು ಮೊಸಳೆಯನ್ನು ವಿಡಿಯೋ ಮಾಡಿಕೊಂಡ್ರೆ, ಇನ್ನೂ ಕೆಲವರು ಮೊಸಳೆ ಜೊತೆಗೆ ಹೆಜ್ಜೆ ಹಾಕಿದ್ರು.
ಮತ್ತೆ ನದಿ ಸೇರಿದ ಮೊಸಳೆ:
ಮೊಸಳೆ ಮಾತ್ರ ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡದೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಯಿತು. ಈ ಕುರಿತು ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.
ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೆ ನದಿ ಬಿಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿ ಮೊಸಳೆ ಆಗಮಿಸಿದ್ದು, ಜನರಲ್ಲಿ ಆತಂಕ ಉಂಟುಮಾಡಿದೆ. ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯರ ಮೇಲೆ ಎರಗಿ ಜನರು ಸಾವನ್ನಪ್ಪಿರುವ ಘಟನೆಗಳು ಸಹ ನಡೆದಿದೆ.
ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು, ಲಾಕ್ಡೌನ್ ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತ್ತಿದ್ದು, ಇಂದು ಗ್ರಾಮಕ್ಕೆ ಮೊಸಳೆ ಆಗಮಿಸಿದ್ದರಿಂದ ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.