ಗುರುಗ್ರಾಮ್: ಲೈಂಗಿಕ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆ ಔಷಧಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಹನ್ನೊಂದು ಜನರನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ ಅಪರಾಧಗಳಿಗೆ ಬಳಸಿದ ಎರಡು ಲ್ಯಾಪ್ ಟಾಪ್ಗಳು ಮತ್ತು ನಾಲ್ಕು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜನರನ್ನು ವಂಚಿಸಲು ಈ ಆರೋಪಿಗಳು ದುಂಡಹೇರಾ ಗ್ರಾಮದಲ್ಲಿ ಸ್ಥಾಪಿಸಿಕೊಂಡಿದ್ದ ನಕಲಿ ಕಾಲ್ ಸೆಂಟರ್ ಅನ್ನು ಜನವರಿ 6 ರಂದು ಪತ್ತೆ ಮಾಡಲಾಗಿದೆ ಎಂದು ಗುರುಗ್ರಾಮ್ ಜಿಲ್ಲೆಯ ಸೈಬರ್ ಅಪರಾಧದ ಸಹಾಯಕ ಪೊಲೀಸ್ ಆಯುಕ್ತ ಪ್ರಿಯಾಂಶು ದಿವಾನ್ ತಿಳಿಸಿದರು. ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿಗಳಾದ ಅಮನ್ ದೀಪ್, ರಂಜಿತ್ ಕುಮಾರ್, ಮೊಹಮ್ಮದ್ ಕಾಸಿಮ್, ಪ್ರತುಶ್ ಕುಮಾರ್ ಮಿಶ್ರಾ, ಸುಶೀಲ್ ಕುಮಾರ್, ಬ್ರಿಜೇಶ್ ಶರ್ಮಾ, ಅನೂಪ್ ಕುಮಾರ್, ರಶಿಕಾ ರಾಣಾ, ಇಶಾ, ಸೋನಾಲಿ ಕನ್ನೋಜಿಯಾ ಮತ್ತು ಮೇಘಾ ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗುರುಗ್ರಾಮದ ಸೈಬರ್ ಅಪರಾಧ (ಪಶ್ಚಿಮ) ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಮತ್ತು 66 ಡಿ ಐಟಿ ಕಾಯ್ದೆಯ ಸೆಕ್ಷನ್ 318, 319 ಮತ್ತು 612 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಅಮನ್ ದೀಪ್ ಮತ್ತು ರಂಜಿತ್ ಕಾಲ್ ಸೆಂಟರ್ ನಡೆಸುತ್ತಿದ್ದು, ಇತರ ಆರೋಪಿಗಳನ್ನು ಅವರು ನೌಕರಿಗೆ ನೇಮಿಸಿಕೊಂಡಿದ್ದರು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
ಡಾ. ರಾಜೀವ್ ದೀಕ್ಷಿತ್ ಎಂಬುವರ ಹೆಸರಿನಲ್ಲಿ 'ದಿ-ವೇದಿಕ್ ಆಯುರ್ವೇದಿಕ್' ಎಂಬ ಫೇಸ್ ಬುಕ್ ಪೇಜ್ ರಚಿಸಿ, ಅದರಲ್ಲಿ ಉತ್ತಮ ಲೈಂಗಿಕ ಆರೋಗ್ಯಕ್ಕಾಗಿ ಗಿಡಮೂಲಿಕೆ ಔಷಧಿಗಳನ್ನು ಮಾರಾಟ ಮಾಡುವ ಜಾಹೀರಾತುಗಳನ್ನು ಹಾಕುತ್ತಿರುವ ಬಗ್ಗೆ ಆರೋಪಿಗಳು ಬಹಿರಂಗಪಡಿಸಿದ್ದಾರೆ. ಜಾಹೀರಾತುಗಳಲ್ಲಿ ನೀಡಲಾದ ಫೋನ್ ನಂಬರಿಗೆ ಗ್ರಾಹಕರು ಕರೆ ಮಾಡಿದಾಗ ಔಷಧಿಗಾಗಿ ಆರ್ಡರ್ ಪಡೆದು ಅವರಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಹಣ ಹಾಕಿಸಿಕೊಳ್ಳುತ್ತಿದ್ದರು. ನಂತರ ಅವರಿಗೆ ನಕಲಿ ಔಷಧಿಗಳನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ, ಕ್ಯೂಆರ್ ಕೋಡ್ ಮತ್ತು ಯುಪಿಐ ಐಡಿಗಳ ಮೂಲಕವೂ ಆರೋಪಿಗಳು ಜನರಿಂದ ಹಣ ಜಮೆ ಮಾಡಿಕೊಳ್ಳುತ್ತಿದ್ದರು. ಕಳೆದ ಸುಮಾರು 9 ರಿಂದ 10 ತಿಂಗಳುಗಳಿಂದ ಈ ವಂಚನೆಯ ವ್ಯವಹಾರ ನಡೆಯುತ್ತಿತ್ತು. ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ 18 ರಿಂದ 20 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿತ್ತು ಮತ್ತು ಹೆಚ್ಚು ಸರಕು ಮಾರಾಟ ಮಾಡಿದವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : 1978ರ ಸಂಭಾಲ್ ಗಲಭೆಯ ಮರುತನಿಖೆಗೆ ಯುಪಿ ಸರ್ಕಾರದ ಆದೇಶ: ವಾರದೊಳಗೆ ವರದಿ ಸಲ್ಲಿಸಲು ಸೂಚನೆ - 1978 SAMBHAL RIOTS CASE