ಶಿರಸಿ(ಉತ್ತರ ಕನ್ನಡ): ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಚಿಕೈ ಗ್ರಾಮದಲ್ಲಿ ನಿನ್ನೆ (ಭಾನುವಾರ)ಈ ಘಟನೆ ನಡೆದಿದೆ.
ಆರೋಪಿಗಳು ಭಾನುವಾರ ಕುಮಟಾಕ್ಕೆ ಆಗಮಿಸಿ, ಬೈಕ್ ಕದ್ದು ದೇವಿಮನೆ ಘಟ್ಟದಲ್ಲಿ ಓರ್ವ ವಾಹನ ಸವಾರನನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ನಂತರ ಸಿದ್ದಾಪುರ - ಕಂಚಿಕೈ ಮಾರ್ಗದ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತಿದ್ದ ಯುವಕನನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದರೋಡೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಥಳಿತದಿಂದ ಗಂಭೀರ ಗಾಯಗೊಂಡಿದ್ದ ಇಬ್ಬರು ದರೋಡೆಕೋರರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮೊದಲು ದರೋಡೆಯ ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ವಿವಿಧೆಡೆ ತೀವ್ರ ತಪಾಸಣೆ ನಡೆಸಿದ್ದಾರೆ.
ರಾಜ್ಯದ ವಿವಿಧೆಡೆ ಇತ್ತೀಚಿಗೆ ನಡೆದ ಪ್ರಕರಣಗಳು:
- ಮಾರಕಾಸ್ತ್ರ ತೋರಿಸಿ ಸುಲಿಗೆ: ಹಾಡಹಗಲೇ ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಲಿಯಮ್ಸ್ ಟೌನ್ನಲ್ಲಿ ಇತ್ತೀಚೆಗೆ ನಡೆದಿತ್ತು. ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಸ್ಕೂಟಿಯಲ್ಲಿ ಹೋಗುತ್ತಿದ್ದ ಸವಾರನನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಆತನ ಜೇಬಿನಲ್ಲಿದ್ದ ಮೊಬೈಲ್ ಫೋನ್, ವ್ಯಾಲೆಟ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ಟ್ವೀಟ್ ಮಾಡುವ ಮೂಲಕ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಠಾಣೆಗೆ ಈವರೆಗೂ ಯಾವುದೇ ದೂರು ಬಂದಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Watch Video: ಬೆಂಗಳೂರಲ್ಲಿ ಹಾಡಹಗಲೇ ಮಾರಕಾಸ್ತ್ರ ತೋರಿಸಿ ಸುಲಿಗೆ!
- 24 ಲಕ್ಷ ರೂಪಾಯಿ ದೋಚಿದ್ದ ನಾಲ್ವರು ಆರೋಪಿಗಳ ಬಂಧನ: ಎಟಿಎಂ ಯಂತ್ರದಿಂದ ಹಣ ದೋಚಿ ಪರಾರಿಯಾಗಿದ್ದ ಆರೋಪದಡಿ ಕಸ್ಟೋಡಿಯನ್ ಸಿಬ್ಬಂದಿ ಸಹಿತ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಸಿಎಂಎಸ್ ಕಸ್ಟೋಡಿಯನ್ ಕಂಪನಿ ಸಿಬ್ಬಂದಿ ಅರುಳ್, ಆತನ ಸಹಚರರಾದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಜುಲೈ 5ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ 24 ಲಕ್ಷ ರೂ.ದೋಚಲಾಗಿತ್ತು. ಜು.5ನೇ ತಾರೀಕು ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಸಿಬ್ಬಂದಿ ಐಸಿಐಸಿಐ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹಣ ತುಂಬಿಸಿದ್ದರು. ಕಸ್ಟೋಡಿಯನ್ ಸಿಬ್ಬಂದಿ ತೆರಳಿದ್ದ ಕೆಲವೇ ನಿಮಿಷದಲ್ಲಿ ಎಟಿಎಂನಲ್ಲಿದ್ದ 24 ಲಕ್ಷ ರೂ. ಕಳ್ಳತನವಾಗಿತ್ತು.
ಇದನ್ನೂ ಓದಿ: ಬೆಂಗಳೂರು: ATM ಯಂತ್ರದಿಂದ 24 ಲಕ್ಷ ರೂಪಾಯಿ ದೋಚಿದ್ದ ನಾಲ್ವರು ಆರೋಪಿಗಳ ಬಂಧನ