ಉತ್ತರಕನ್ನಡ (ಕಾರವಾರ): ಹಂದಿಗೆ ಅಳವಡಿಸಿದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಏಳು ಜಾನುವಾರುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಜಮೀನಿನ ಸುತ್ತಲೂ ವೈರ್ಗಳನ್ನು ಎಳೆದು ವಿದ್ಯುತ್ ಹರಿಬಿಟ್ಟಿದ್ದರು. ಹಂದಿ ಬಾರದಂತೆ ತಡೆಯಲು ಈ ರೀತಿ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಸೈರೋಬ ನಾಯ್ಕ್ ಎಂಬುವವರು ಎಮ್ಮೆ, ಕೋಣ ಹಾಗೂ ಕರುಗಳನ್ನು ಜಮೀನಿಗೆ ಹೊಡೆದುಕೊಂಡು ಹೋಗುವಾಗ ತಂತಿ ತುಳಿದಿದ್ದು, ಪ್ರಾಣಿಗಳಿಗೆ ಶಾಕ್ ತಗುಲಿದೆ. ಇದರಿಂದ ಎಮ್ಮೆ, ಕೋಣ ಹಾಗೂ ಕರುಗಳು ಸೇರಿದಂತೆ ಏಳು ಜಾನುವಾರುಗಳು ಮೃತಪಟ್ಟಿವೆ.
ಘಟನೆಯಿಂದ 2 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರದೀಪ ಸುಬ್ಬಾ ವಾಘ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ನರಸಿಂಹ ನಾರಾಯಣ ಕಾಣೆಕರ, ದಯಾನಂದ ರಾಮ ಕಾಣೆಕರ ಹಾಗೂ ಅನಂದರಾಯ ರಾಮ ಕಾಣೆಕರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಓದಿ: ಲಂಪಿ ರೋಗದಿಂದ ಸಾವಿರಾರು ಜಾನುವಾರು ಸಾವು: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ