ಕಾರವಾರ: ನಿನ್ನೆ ರಾತ್ರಿ ಸಾವನ್ನಪ್ಪಿದ್ದ ಯಲ್ಲಾಪುರ ಮೂಲದ 69 ವರ್ಷದ ವೃದ್ಧೆಯಲ್ಲಿ ಕೊರೊನಾ ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದರೆ ವೃದ್ಧೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿಲ್ಲ. ಮಹಾರಾಷ್ಟ್ರದಲ್ಲಿ ಕಳೆದ ಎಂಟು ದಿನಗಳ ಹಿಂದೆ ವೃದ್ಧೆಯ ಪತಿ ಸಾವನ್ನಪ್ಪಿದ್ದರು. ಇದರಿಂದ ಈಕೆ ಯಲ್ಲಾಪುರದ ಮಗನ ಮನೆಗೆ ಬಂದಿದ್ದರು.
ತುಂಬಾ ಆಯಾಸದಿಂದ ಬಳಲುತ್ತಿದ್ದ ಈಕೆಯನ್ನು ಮನೆಯಲ್ಲಿ ಇಡದೇ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಗಂಟಲು ದ್ರವ ಕೂಡ ಪರೀಕ್ಷೆ ನಡೆಸಲಾಗಿತ್ತು. ಈ ಮಧ್ಯೆ ಬಾತ್ರೂಂಗೆ ತೆರಳಿದಾಗ ಜಾರಿ ಬಿದ್ದು ಗಂಭೀರಗೊಂಡಿದ್ದರು. ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.