ಕಾರವಾರ: ಕೊರೊನಾ ಅಟ್ಟಹಾಸಕ್ಕೆ ಬರೋಬ್ಬರಿ ಎರಡು ತಿಂಗಳುಗಳ ಕಾಲ ಬಂದ್ ಆಗಿದ್ದ ಉತ್ತರಕನ್ನಡ ಜಿಲ್ಲೆಗೆ ನಾಲ್ಕನೆ ಹಂತದ ಲಾಕ್ ಡೌನ್ ಸ್ವಲ್ಪ ರಿಲೀಫ್ ನೀಡಿದೆ. ಆದರೆ, ಜಿಲ್ಲೆಯೆಲ್ಲೆಡೆ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ಆರಂಭಿಸಿವೆಯಾದರೂ ಗ್ರಾಹಕರು ಮಾತ್ರ ಅಂಗಡಿ ಕಡೆ ಮುಖ ಮಾಡದೇ ಇರುವುದು ಇದೀಗ ವ್ಯಾಪಾರಸ್ಥರ ಆತಂಕಕ್ಕೆ ಕಾರಣವಾಗಿದೆ.
ಹೌದು, ಜಗತ್ತನ್ನೇ ತಲ್ಲಣಗೊಳಿಸುತ್ತಿರೋ ಮಹಾಮಾರಿ ಕೊರೊನಾ ವೈರಸ್ ಹಾವಳಿ ಇನ್ನೂ ಕೂಡ ಕಡಿಮೆಯಾಗಿಲ್ಲ. ಆದರೆ ವೈರಸ್ ತಡೆಗೆ ಎರಡು ತಿಂಗಳುಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದ್ದ ಸರ್ಕಾರ ನಾಲ್ಕನೇ ಹಂತದ ಲಾಕ್ಡೌನ್ ಸ್ವಲ್ಪ ರಿಲೀಫ್ ನೀಡಿದ್ದು, ಕೆಲವೊಂದಿಷ್ಟು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕಾರವಾರದಲ್ಲಿ ಒಂದೊಂದೆ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳುತ್ತಿದ್ದು, ಬೀದಿಯಲ್ಲಿ ಜನ ಸಂಚಾರ ಕೂಡ ಯಥಾಸ್ಥಿತಿಗೆ ಬಂದಿಗೆ.
ಆದರೆ ಎಷ್ಟೇ ಜನ ಓಡಾಟ ಮಾಡಿದರೂ ಅಂಗಡಿ ಮುಂಗಟ್ಟುಗಳತ್ತ ಜನ ಮುಖ ಮಾಡುತ್ತಿಲ್ಲ. ತೀರಾ ಅವಶ್ಯವಿರುವ ದಿನಸಿ ಸಾಮಗ್ರಿಗಳನ್ನ ಬಿಟ್ಟರೆ ಬಟ್ಟೆ, ಫ್ಯಾನ್ಸಿ, ಬೇಕರಿ, ಮೊಬೈಲ್ ಶಾಪ್ ಗಳು ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿವೆ. ಇದರಿಂದ ಬಹುತೇಕ ವ್ಯಾಪಾರಸ್ಥರು ಖಾಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಸ್ವಲ್ಪ ಮಟ್ಟಿಗೆ ಸಡಿಲಿಕೆ ನೀಡಲಾಗಿದೆಯಾದರೂ ಕೊರೊನಾ ಪ್ರಕರಣಗಳು ಮಾತ್ರ ದಿನವೊಂದರಂತೆ ತಾಲೂಕು ಕೇಂದ್ರಗಳಲ್ಲಿ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಈ ಕಾರಣದಿಂದ ಹೊರ ರಾಜ್ಯದಿಂದ ಬರುವವರಿಗೆ ಸರ್ಕಾರಿ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದು ಹೊರ ಜಿಲ್ಲೆಗಳಿಂದ ಬರುವವರಿಗೆ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.