ಶಿರಸಿ: ಮದುವೆ, ನಾಮಕರಣ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ಗಳು ಬೇಕೇ ಬೇಕು. ಆದರೆ ಕೊರೊನಾದಿಂದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದ್ದು, ಕೆಲಸವಿಲ್ಲದೆ ಕ್ಯಾಮೆರಗಳು ಧೂಳು ಹಿಡಿಯುತ್ತಿವೆ.
ತಾಲೂಕಿನಾದ್ಯಂತ ಸುಮಾರು ನೂರಕ್ಕೂ ಅಧಿಕ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳಿದ್ದು, ಇದನ್ನೇ ವೃತ್ತಿಯಾಗಿಸಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಇತರೆ ಕೆಲಸದ ಜೊತೆಗೆ ಫೋಟೊಗ್ರಫಿಯನ್ನು ಪಾರ್ಟ್ಟೈಮ್ ಕೆಲಸವನ್ನಾಗಿಸಿಕೊಂಡಿದ್ದಾರೆ. ಆದರೆ ಕೊರೊನಾದಿಂದ ಇವರೆಲ್ಲ ಕೆಲಸವಿಲ್ಲದೆ ಮನೆಯಲ್ಲೆ ಕುಳಿತುಕೊಳ್ಳುವಂತಾಗಿದೆ.
ಛಾಯಾಗ್ರಾಹಕರು ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿದ್ದು, ಇವರ ನಿಗದಿತ ಮಾಹಿತಿ ಸರ್ಕಾರಕ್ಕೂ ಇಲ್ಲದಂತಾಗಿದೆ. ಮಾರ್ಚ್-ಜೂನ್ನಲ್ಲಿ ಮದುವೆ ಸಮಾರಂಭಗಳು ಅತಿ ಹೆಚ್ಚು ನಡೆಯುತ್ತವೆ. ಕೊರೊನಾದಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಛಾಯಾಗ್ರಾಹಕರು, ವಿಡಿಯೋಗ್ರಾಫರ್ಗಳು ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಸರ್ಕಾರ ಸಹಾಯಧನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.