ಭಟ್ಕಳ(ಉತ್ತರಕನ್ನಡ) : ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ಮೂರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು, ಅವರ ಕೈಗೆ 14 ದಿನಗಳ ಕ್ವಾರಂಟೈನ್ ಸೀಲು ಹಾಕಿ ಬಿಡುಗಡೆಗೊಳಿಸಿದ್ದಾರೆ.
ಹೆಬಳೆ ಗ್ರಾ.ಪಂ ವ್ಯಾಪ್ತಿಯ ತೆಂಗಿನಗುಂಡಿ ಅಥರ್ ಮೊಹಲ್ಲಾದ ಅಬ್ದುಲ್ ರಹೀಮ್ ಅಥರ್ ಮಸೀದಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ಸಾರ್ವಜನಿಕರಿಂದ ವ್ಯಾಪಕ ವಿರೋಧ ಉಂಟಾಗಿದ್ದು ,ಭಟ್ಕಳದಲ್ಲಿ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಈ ಕುರಿತಂತೆ ಮರ್ಕಝಿ ಜಮಾತುಲ್ ಮುಸ್ಲಿಮೀನ್ ತೆಂಗಿನಗುಂಡಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಕ್ಬಾಲ್ ಬಂಗಾಲಿ ಮಾಹಿತಿ ನೀಡಿದ್ದು, ನಾವು ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿಲ್ಲ. ತಂಝಿಮ್ ಹಾಗೂ ವಕ್ಫ್ ಬೋರ್ಡ್ ನಿರ್ದೇಶನದಂತೆ ಪಾಲನೆ ಮಾಡುತ್ತಿದ್ದು, ಕೇವಲ ಮೂರು ಮಂದಿ ಮಾತ್ರ ನಮಾಝ್ ನಿರ್ವಹಿಸುತ್ತಿದ್ದಾರೆ. ಮಸೀದಿಗೆ ಮೂವರಿಗಿಂತ ಹೆಚ್ಚು ಜನ ಹೋಗಲು ಅನುಮತಿ ಇಲ್ಲ. ಹಾಗಾಗಿ ಪೊಲೀಸರು ಲಾಕ್‍ಡೌನ್ ನಿಯಮ ಉಲ್ಲಂಘನೆ ನೆಪವೊಡ್ಡಿ ವಿನಾಃಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜುರನ್ನು ದೂರವಾಣಿ ಮೂಲಕ ಸಂರ್ಪಕಿಸಿದಾಗ, ಜನರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಸೀದಿಯಲ್ಲಿ ನೇಮಕವಾಗಿರುವ ಇಮಾಮ್ ಹಾಗೂ ಇತರ ಇಬ್ಬರನ್ನು ಹೊರತುಪಡಿಸಿ ಬೇರೆಯವರಿಗೆ ಮಸೀದಿಯಲ್ಲಿ ನಮಾಜ್ ನಿರ್ವಹಿಸಲು ಅವಕಾಶವಿಲ್ಲ. ಭಟ್ಕಳದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ವ್ಯಕ್ತಿಗಳು ಮಸೀದಿಯಲ್ಲಿ ನೇಮಕಗೊಂಡ ಇಮಾಮರಲ್ಲ. ಈ ಹಿನ್ನೆಲೆ ಅವರನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ ಎಂದಿದ್ದಾರೆ.