ಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಕರಾವಳಿ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಕುಮಟಾದಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ನಡೆಯಿತು. ಈ ಮುಖೇನ ಕೈ ತಪ್ಪಿರುವ ಜಿಲ್ಲೆಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಪಕ್ಷ ಮುಂದಡಿ ಇಟ್ಟಿತು. ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ಬೆನ್ನಲ್ಲೇ ಪ್ರಕರಣವನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿಸಿಕೊಳ್ಳಲು ಪಕ್ಷ ಮುಂದಾಗಿದೆ. ಬೃಹತ್ ಸಮಾವೇಶ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದರು.
'ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸಲಾಗದ ಪರಿಸ್ಥಿತಿ ಇದೆ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗೆ ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಉತ್ತರ ಕನ್ನಡದ ಜನತೆ ನಮಗೆ ಶಕ್ತಿ ಕೊಡುತ್ತೀರೆಂದು ನಂಬಿ ಬಂದಿದ್ದೇನೆ. 27 ಸಾವಿರ ಮತದಾರರನ್ನು ಬಿಜೆಪಿ ಮತದಾರರ ಪಟ್ಟಿಯಿಂದಲೇ ಕೈಬಿಟ್ಟಿದ್ದು, ಈ ಕುರಿತು ಎಲೆಕ್ಷನ್ ಕಮಿಷನ್‌ಗೆ ದೂರು ಸಲ್ಲಿಸಿ ಬಂದಿದ್ದೇನೆ. ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಿ' ಎಂದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ ಸೇರಿದಂತೆ ಹಿರಿಯ ಮುಖಂಡರು, ಜಿಲ್ಲೆಯ ಮಾಜಿ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮಾಜಿ ಸಿಎಂ ಸಿದ್ಧರಾಮಯ್ಯ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಟೇಕಾಫ್ ಆಗದೇ ಸಮಾವೇಶಕ್ಕೆ ಗೈರಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಐದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಡಿಕೆಶಿ ಆದೇಶ